ಒಳ ಮೀಸಲಾತಿ ಜಾರಿಗೆ ಮುನಿಯಪ್ಪ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.31- ಪರಿಶಿಷ್ಟ ಜಾತಿಯಲ್ಲಿ ಅಸ್ಪೃಶ್ಯ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಗೊಳಿಸಲು ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಒತ್ತಾಯಿಸಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿ ಯಲ್ಲಿಂದು ಮಾತನಾಡಿದ ಅವರು, ಆಂಧ್ರ ಪ್ರದೇಶ ಸರ್ಕಾರ ಒಳಮೀಸಲಾತಿ ಜಾರಿಗೆ ಮೂರು ಬಾರಿ ಪ್ರಯತ್ನಿಸಿತ್ತು. 2004ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅನುಮತಿ ಇಲ್ಲ. ಲೋಕಸಭೆಯಲ್ಲಿ ಕಾನೂನು ತಿದ್ದುಪಡಿಯಾಗಬೇಕೆಂದು ಹೇಳಿ ಆಂಧ್ರ ಪ್ರದೇಶ ಸರ್ಕಾರ ಜಾರಿಗೆ ತಂದಿದ್ದ ಒಳಮೀಸಲಾತಿ ಕಾಯ್ದೆಯನ್ನು ರದ್ದುಗೊಳಿಸಿತ್ತು.

ಆ ತೀರ್ಪಿನ ಪ್ರಮುಖ ಅಂಶಗಳನ್ನು ಮಾರ್ಪಡಿಸುವಂತೆ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆ.27ರಂದು ತೀರ್ಪು ನೀಡಿದ್ದು, ಒಳ ಮೀಸಲಾತಿ ಜಾರಿಗೆ ತರುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಅಭಿಪ್ರಾಯ ಪಟ್ಟಿದೆ ಎಂದು ಹೇಳಿದರು.

ಒಳಮೀಸಲಾತಿ ಬೇಡಿಕೆಗೆ ಸುಮಾರು 43 ವರ್ಷಗಳ ಇತಿಹಾಸವಿದೆ. ಎನ್.ರಾಚಯ್ಯ ಅವರ ಕಾಲದಿಂದಲೂ ಬೇರೆ ಬೇರೆ ಸ್ವರೂಪದಲ್ಲಿ ಹೋರಾಟ ನಡೆಯುತ್ತಲೇ ಇದೆ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿಯ ಅಸ್ಪೃಶ್ಯ ಸಮುದಾಯಗಳಾದ ಎಡಗೈ ಮತ್ತು ಬಲಗೈನ ಶಾಸಕರು ಮತ್ತು ಸಂಸದರು, ಅಧಿಕಾರಿಗಳು ಮತ್ತು ನಿವೃತ್ತರು ಹಲವಾರು ಸಭೆಗಳನ್ನು ಮಾಡಿ ಸದಾಶಿವ ಆಯೋಗದ ವರದಿ ಜಾರಿಗೆ ಪರಸ್ಪರ ಒಪ್ಪಿಗೆ ನೀಡಿದ್ದರು.

ಇನ್ನೇನು ಅದು ಜಾರಿಗೊಳ್ಳಬೇಕು ಎನ್ನುವ ಹಂತದಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ನೆನೆಗುದಿಗೆ ಬಿದ್ದಿದೆ. ಇದು ಒಂದು ರಾಜ್ಯದ ಸಮಸ್ಯೆ ಅಲ್ಲ. ದೇಶದ ಎಲ್ಲಾ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಸೌಲಭ್ಯ ಹಂಚಿಕೆಯಲ್ಲಿ ತಾರತಮ್ಯವಿದೆ. ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಸಂವಿಧಾನದ 341, 342, 342ಎ ಪರಿಚ್ಛೇದಗಳಿಗೆ ತಿದ್ದುಪಡಿ ತಂದು ಒಳಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರ ರಾಜ್ಯಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ಅಧಿವೇಶನದಲ್ಲಿ ಹೊಸ ಮೀಸಲಾತಿ ಜಾರಿಯ ಪ್ರಸ್ತಾವನೆಯನ್ನು ಮಂಡಿಸಬೇಕು. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ಒಳಮೀಸಲಾತಿಗೆ ಈಗಾಗಲೇ ಸಹಮತ ವ್ಯಕ್ತಪಡಿಸಿರುವುದರಿಂದ ಅವಿರೋಧವಾಗಿ ಪ್ರಸ್ತಾವನೆಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕೆಂದು ಮುನಿಯಪ್ಪ ಸಲಹೆ ನೀಡಿದರು.

ಬಲಗೈ ಸಮುದಾಯದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ಒಳಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಲಂಬಾಣಿ, ಬೋವಿ ಸಮುದಾಯದ ನಾಯಕರು ಕೂಡ ಸಹಕಾರ ನೀಡಬೇಕೆಂದು ಅವರು ಒತ್ತಾಯಿಸಿದರು. ಮಾಜಿ ಸಂಸದ ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಧರ್ಮಸೇನಾ, ಮಾಹಿತಿ ಆಯೋಗದ ಮಾಜಿ ಆಯುಕ್ತ ಎಲ್.ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

Facebook Comments