ಜನಸಾಮಾನ್ಯರ ಮೇಲೆ ಪರಿಣಾಮಬೀರುವ ವಿಷಯಗಳ ಬಗ್ಗೆ ರಾಜಿ ಇಲ್ಲ : ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರ, ಫೆ.20 (ಪಿಟಿಐ)- ಆಡಳಿತ ಪಕ್ಷದ ಕಾರ್ಯ ವೈಖರಿಯನ್ನು ವಿರೋಧಿಸುವುದು ಮಾತ್ರವೇ ಪ್ರತಿಪಕ್ಷದ ಕೆಲಸವಲ್ಲ. ಆದರೆ, ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಮಾತ್ರ ಯಾವುದೇ ರಾಜಿಯಿಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನೂತನ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.  ಕೇರಳ ಭೇಟಿಗಾಗಿ ಆಗಮಿಸಿರುವ ಅವರು ಕೊಲ್ಲಂನಲ್ಲಿ ಕಾಂಗ್ರೆಸ್-ಯುಡಿಎಫ್ ಸಹಯೋಗದಲ್ಲಿ ಆಯೋಜಿಸಿದ್ದ ಐಶ್ವರ್ಯ ಕೇರಳ ಯಾತ್ರ ಸಾರ್ವಜನಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡ ರಮೇಶ್ ಚೆನ್ನಿಥಾಲ ಕೂಡ ಇದ್ದರು.

ಈ ಸಂದರ್ಭದಲ್ಲಿ ಕೇವಲ ಸರ್ಕಾರದ ನೀತಿ, ನಿಯಮಗಳನ್ನು ವಿರೋಧಿಸುವುದಷ್ಟೇ ವಿರೋಧ ಪಕ್ಷಗಳ ಕಾರ್ಯವಲ್ಲ, ಜನಸಾಮಾನ್ಯರ ಹಿತದೃಷ್ಟಿಗೆ ಧಕ್ಕೆ ತರುವ ಯಾವುದೇ ಕಾನೂನು ಜಾರಿಯಾಗದಂತೆ ತಡೆಯುವುದು ಪ್ರತಿಪಕ್ಷದ ಕರ್ತವ್ಯ. ಅಂತಹ ವಿಷಯಗಳಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು. ಗುಲಾಂ ನಬಿ ಆಜಾದ್ ಅವರು ನಿವೃತ್ತಿ ನಂತರ ರಾಜ್ಯಸಭೆ ಪ್ರತಿಪಕ್ಷದ ಮುಖಂಡರಾಗಿ ಅಧಿಕಾರ ವಹಿಸಿಕೊಂಡ ಖರ್ಗೆ ಅವರ ಪ್ರಥಮ ಪ್ರಚಾರ ಭಾಷಣ ಇದಾಗಿತ್ತು.

ಮಾತು ಮುಂದುವರಿಸಿದ ಖರ್ಗೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳು ರೈತರ ಹಿತವನ್ನು ಕಾಪಾಡುವುದಿಲ್ಲ. ಈ ವಿವಾದಾತ್ಮಕ ಕಾನೂನುಗಳನ್ನು ವಾಪಾಸು ಪಡೆದು ಅವುಗಳ ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿ ವಹಿಸಬೇಕು ಎಂದು ಆಗ್ರಹಿಸಿದರು. ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್‍ಡಿಎಫ್ ರಾಜ್ಯ ಸರ್ಕಾರಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸ್ಥಳೀಯ ತೆರಿಗೆ ಕಡಿಮೆ ಮಾಡುವ ಮೂಲಕ ಜನರ ಮೇಲಿ ಹೊರೆ ಕಡಿಮೆ ಮಾಡಲು ಒತ್ತಾಯಿಸಿದರು.

ಏಪ್ರಿಲ್-ಮೇ ಮಾಸದಲ್ಲಿ ಕೇರಳ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್-ಯುಡಿಎಫ್ ಸಮ್ಮಿಶ್ರ ಸರ್ಕಾರ ಈ ಐಶ್ವರ್ಯ ಕೇರಳ ಯಾತ್ರವನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸಂದೇಶದ ಮೇರೆಗೆ ಕೇರಳ ಭೇಟಿ ನೀಡಿರುವ ಖರ್ಗೆ ಅವರು ಯಾತ್ರ ಮೂಲಕ ಚುನಾವಣಾ ಪ್ರಚಾರ ಕಾರ್ಯವನ್ನು ಈಗಲೇ ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Facebook Comments