ಸ್ಯಾಂಡಲ್‍ವುಡ್‍ನಲ್ಲಿ ಕೋಲಾಹಲ ಸೃಷ್ಟಿಸುತ್ತಿದೆ ಕಿಚ್ಚನ ‘ಬಳೆ’ ಟ್ವೀಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21-ನಾನು ಮತ್ತು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ , ಬಳೆ ಅಲ್ಲ ಎಂದು ಹೇಳುವ ಮೂಲಕ ಕಿಚ್ಚ ಸುದೀಪ್ ಭಾರೀ ತಿರುಗೇಟು ನೀಡಿದ್ದು, ನಮ್ಮ ವಿರುದ್ಧ ಷಡ್ಯಂತ್ರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳು ಮಾತ್ರ ಎಂದು ಎಚ್ಚರಿಕೆ ನೀಡಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ನಡೆಯುತ್ತಿರುವ ಸ್ಟಾರ್ ವಾರ್ ವಿಪರೀತಕ್ಕೆ ಹೋಗಿದ್ದು, ಅಭಿಮಾನಿಗಳ ನಡುವಿನ ಕಚ್ಚಾಟಕ್ಕೆ ಸ್ಟಾರ್ ನಟರೂ ಕೂಡ ತುಪ್ಪ ಸುರಿಯುತ್ತಿದ್ದಾರೆ.

ನಿನ್ನೆ ಪೈಲ್ವಾನ್ ಚಿತ್ರದ ಪೈರಸಿ ಲಿಂಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ವೀರೇಶ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.ಅದರ ಬೆನ್ನಲ್ಲೇ ಆತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಎಂಬ ವದಂತಿಗಳು ಕೇಳಿ ಬಂದವು.

ಈ ಬೆಳವಣಿಗೆ ನಂತರ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನೂ ಗೊತ್ತಿಲ್ಲ. ನನ್ನ ಮೌನ, ನನ್ನ ತಾಳ್ಮೆ ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳು ಮಾತ್ರ ಎಂದು ಹೇಳುವ ಮೂಲಕ ನೇರ ಯುದ್ಧ ಸಾರಿದ್ದಾರೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿ ಅದರ ಮಾರುಕಟ್ಟೆಯನ್ನು ಹಾಳು ಮಾಡಲು ಕೆಲವು ವ್ಯಕ್ತಿಗಳು ಪ್ರಯತ್ನ ಪಡುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಇತ್ತ ಸುದೀಪ್ ಅವರು ತಮ್ಮ ಚಿತ್ರದ ಪ್ರಚಾರಕ್ಕಾಗಿ ದರ್ಶನ್ ಅಭಿಮಾನಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿದ್ದವು.

ಇದಕ್ಕೆ ಮೂರು ದಿನಗಳ ಹಿಂದೆ ಟ್ವೀಟರ್‍ನಲ್ಲಿ ತಿರುಗೇಟು ನೀಡಿದ್ದ ದರ್ಶನ್ ಅವರು ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ. ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್‍ತಿರುವ ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು. ನನ್ನ ಅನ್ನದಾತರು ಸೆಲೆಬ್ರಿಟಿಗಳನ್ನು ಕೆಣಕಲು ಪ್ರಚೋದಿಸಲು ಬರಬೇಡಿ ಎಂದು ಎಚ್ಚರಿಕೆ ನೀಡಿದ್ದರು.

ಇಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಸುದೀಪ್ ಟ್ವೀಟ್ ಮಾಡಿದ್ದು, ಪೈಲ್ವಾನ್ ಚಿತ್ರದ ಶ್ರಮ ಹಾಳು ಮಾಡುತ್ತಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲ ದಿನಗಳು ಮಾತ್ರ. ನಾವೇನು ಬಳೆ ತೊಟ್ಟಿಕೊಂಡಿಲ್ಲ ಎಂದು ಪ್ರತಿ ಸವಾಲು ಹಾಕುವ ಧಾಟಿಯಲ್ಲಿ ಮಾತನಾಡಿದ್ದಾರೆ. ಈ ಟ್ವೀಟ್ ಸ್ಯಾಂಡಲ್‍ವುಡ್‍ನಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.

ಚಿತ್ರರಂಗವೊಂದು ಕುಟುಂಬವಿದ್ದಂತೆ. ಇಲ್ಲಿ ಎಲ್ಲರೂ ಬಂಧುಗಳಿದ್ದಂತೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೇಳಿಕೆ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಆದರೆ ಅದು ಫಲ ನೀಡಿದಂತೆ ಕಾಣುತ್ತಿಲ್ಲ.

Facebook Comments