ಬಾಲಕನನ್ನು ಅಪಹರಿಸಿ ಬಿಟ್‍ಕಾಯಿನ್‍ಗೆ ಬೇಡಿಕೆಯಿಟ್ಟ ಹೈಟೆಕ್ ಕಿಲಾಡಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಡಿ.18- ಎಂಟು ವರ್ಷದ ಬಾಲಕ ಅನುಭವ್‍ನನ್ನು ಅಪಹರಣ ಮಾಡಿರುವ ದುಷ್ಕರ್ಮಿಗಳು ಬಿಟ್‍ಕಾಯಿನ್‍ಗಳ ಮೂಲಕ 10 ಕೋಟಿಗೂ ಹೆಚ್ಚು ಮೊತ್ತದ ಹಣ ನೀಡುವಂತೆ ಒತ್ತಡ ಹೇರಿದ್ದಾರೆ. ದುಷ್ಕರ್ಮಿಗಳು ಹೈಟೆಕ್ ತಂತ್ರಜ್ಞಾನ ಬಳಸುತ್ತಿದ್ದು, ಪೊಲೀಸರನ್ನು ಯಾಮಾರಿಸುತ್ತಿದ್ದು, ಪೋಷಕರನ್ನು ಆಘಾತಕ್ಕೊಳಗಾಗುವಂತೆ ಮಾಡುತ್ತಿದ್ದಾರೆ. ಈ ಮೊದಲು ನೂರು ಬಿಟ್‍ಕಾಯಿನ್‍ಗಳಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು.

ಅದರ ಮೌಲ್ಯ ಸರಿಸುಮಾರು ಮೊತ್ತ 17 ಕೋಟಿಗಳಾಗುವ ಅಂದಾಜಿತ್ತು. ನಂತರ ಹೊಸದಾಗಿ ಸಂದೇಶ ರವಾನೆ ಮಾಡಿದ್ದು, 60 ಬಿಟ್‍ಕಾಯಿನ್‍ಗಳನ್ನು ನೀಡುವಂತೆ ಧಮ್ಕಿ ಹಾಕಿದ್ದಾರೆ. ಇದರ ಮೌಲ್ಯ ಅಂದಾಜು 10 ಕೋಟಿಗಳಾಗುವ ನಿರೀಕ್ಷೆಗಳಿವೆ. ಆರೋಪಿಗಳು ಸ್ಥಳೀಯವಾಗಿ ಯಾವುದೇ ಮೊಬೈಲ್ ಪೋನ್‍ಗಳನ್ನು ಬಳಸದೆ ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದು, ಡಾರ್ಕ್‍ವೆಬ್ ಸಹಾಯದ ಮೂಲಕ ಸಂದೇಶ ಕಳುಹಿಸುವುದು, ಬೇಡಿಕೆ ಮಂಡಿಸುವುದನ್ನು ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದರಿಂದಾಗಿ ಪೊಲೀಸರಿಗೆ ಆರೋಪಿಗಳನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ. ಡಿ.17ರಂದು ಗುರುವಾರ ಸಂಜೆ ಬೆಳ್ತಂಗಡಿಯ ಕಾರ್‍ಸ್ಟ್ರೀಟ್‍ನ ನಿವಾಸಿ ಬಿಜಾಯ್ ಏಜೆನ್ಸಿಯ ಮಾಲೀಕ ಬಿಜಾಯ್ ಅವರ 8 ವರ್ಷದ ಪುತ್ರ ಅನುಭವ್‍ನನ್ನು ಆರೋಪಿಗಳು ಕಾರಿನಲ್ಲಿ ಅಪಹರಣ ಮಾಡಿದ್ದರು. ಈ ಬಗ್ಗೆ ಅನುಭವ್‍ನ ತಾತ ಎ.ಕೆ.ಶಿವನ್ ಅವರು ಬೆಳ್ತಂಗಡಿ ಪೆÇಲೀಸರಿಗೆ ದೂರು ನೀಡಿದ್ದಾರೆ.

ತಾತನ ಜತೆ ವಾಕಿಂಗ್ ಹೋಗಿದ್ದ ಅನುಭವ್‍ನನ್ನು ಅವರ ಮನೆ ಬಳಿಯೇ ಆರೋಪಿಗಳು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ತಾತ ಮೊಮ್ಮಗನನ್ನು ರಕ್ಷಣೆ ಮಾಡಿಕೊಳ್ಳಲು ಕಾರಿನ ಹಿಂದೆ ಓಡಿದರೂ ಪ್ರಯೋಜನವಾಗಲಿಲ್ಲ. ಕೆಲ ಹೊತ್ತಿನ ಬಳಿಕ ಅನುಭವ್‍ನ ತಾಯಿಗೆ ಕರೆ ಮಾಡಿದ ದುಷ್ಕರ್ಮಿಗಳು ಹಣ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಕಾಬಂದಿ ಮಾಡಿ ತಪಾಸಣೆ ಮಾಡುತ್ತಿದ್ದಾರೆ. ಆದಾಗ್ಯೂ ಆರೋಪಿಗಳ ಪತ್ತೆಯಾಗಿಲ್ಲ. ಬಾಲಕನ ರಕ್ಷಣೆ ಬಗ್ಗೆ ಆತಂಕಗಳು ಹೆಚ್ಚಾಗಿವೆ.

Facebook Comments