ಯುವಕನನ್ನು ಅಪಹರಿಸಿ 2 ಕೋಟಿಗೆ ಬೇಡಿಕೆ ಇಟ್ಟಿದ್ದ 4 ಆರೋಪಿಗಳು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ. 26- ನರ್ಸಿಂಗ್ ಕಾಲೇಜೊಂದರ ಮಾಲೀಕರ ಮಗ ಯುಕೆಯಲ್ಲಿ ಎಂ.ಎಸ್. ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯನ್ನು ಅಪಹರಿಸಿ ಎರಡು ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ನಾಲ್ವರು ಅಪಹರಣಕಾರರನ್ನು ಏಳು ಗಂಟೆ ಅವಧಿಯಲ್ಲಿ ಬಾಣಸವಾಡಿ ಉಪವಿಭಾಗದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಬ್ದುಲ್ ಫಹಾದ್, ಜಬೀಉಲ್ಲ, ಸಯ್ಯದ್ ಸಲ್ಮಾನ್, ತೌಹೀದ್ ಬಂಧಿತ ಆರೋಪಿಗಳು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಅಪಹರಣವಾಗಿದ್ದ 22 ವರ್ಷದ ವಿದ್ಯಾರ್ಥಿಯನ್ನು ರಕ್ಷಿಸಿರುವ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ. ನರ್ಸಿಂಗ್ ಕಾಲೇಜೊಂದರ ಮಾಲೀಕರ ಮಗ ರಬೀಜ್ ಅರಾಪತ್ ಅವರು ಯುಕೆನಲ್ಲಿ ಎಂ.ಎಸ್. ಪದವಿಗೆ ಸೇರಿದ್ದು ಬೆಂಗಳೂರಿನ ತಮ್ಮ ಮನೆಯಿಂದಲೇ ಆನ್‍ಲೈನ್‍ನಲ್ಲಿ ಪಾಠ ಕೇಳುತ್ತಿದ್ದಾರೆ. ರಬೀಜ್ ಅರಾಪತ್ ಅವರ ಮೊಬೈಲ್‍ಗೆ ನಿನ್ನೆ ಮಧ್ಯಾಹ್ನ ಯಾರೋ ಕರೆ ಮಾಡಿದ್ದು ದ್ವಿಚಕ್ರ ವಾಹನದಲ್ಲಿ ಹೊರ ಹೋಗಿದ್ದಾರೆ. ಆಗ ಅಪಹರಣಕಾರರು ಅವರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ.

ಯುವಕನ ತಂದೆಯ ಪರಿಚಯಸ್ತರು ಕರೆ ಮಾಡಿ ನಿಮ್ಮ ಮಗನನ್ನು ಕಾರ್‍ನಲ್ಲಿ ಯಾರೋ ಅಪಹರಿಸಿಕೊಂಡು ಹೋದರೆಂದು ತಿಳಿಸಿದ್ದಾರೆ. ತಕ್ಷಣ ತಂದೆ ಮಗನ ಮೊಬೈಲ್‍ಗೆ ಕರೆ ಮಾಡಿದಾಗ ಅದು ಸ್ವಿಚ್‍ಆಫ್ ಆಗಿದೆ. ಕೂಡಲೇ ಅವರು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪಹರಣಕಾರರು ಯುವಕನ ತಂದೆಗೆ ಕರೆ ಮಾಡಿ 2 ಕೋಟಿ ಹಣ ಕೊಟ್ಟರೆ ನಿಮ್ಮ ಮಗನನ್ನು ಬಿಡುತ್ತೇವೆ, ಇಲ್ಲದಿದ್ದರೆ ಕೈ, ಕಾಲು ಕತ್ತರಿಸಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಯುವಕನ ತಂದೆ ನೀಡಿದ ದೂರಿನ ಮೇರೆಗೆ ಅಪಹರಣಕಾರರನ್ನು ಸೆರೆ ಹಿಡಿಯಲು ಪೂರ್ವ ವಿಭಾಗದ ಡಿಸಿಪಿ ಡಾ||ಶರಣಪ್ಪ ಅವರು ಬಾಣಸವಾಡಿ ಎಸಿಪಿ ಎನ್.ಬಿ.ಸಕ್ರಿ ಅವರ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಈ ತಂಡಗಳು ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಕೃತ್ಯ ನಡೆದ ಸ್ಥಳದಲ್ಲಿ ಲಭ್ಯವಾದ ಮಾಹಿತಿ ಹಾಗೂ ಸಿಸಿಟಿವಿಯಲ್ಲಿ ಲಭ್ಯವಾದ ದೃಶ್ಯಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಯುವಕನನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.

ಆರೋಪಿಗಳು ಹೆಚ್ಚು ಸಾಲ ಮಾಡಿಕೊಂಡಿದ್ದು ಹಣದ ಅವಶ್ಯಕತೆಗಾಗಿ ಶ್ರೀಮಂತರ ಮಕ್ಕಳನ್ನು ಅಪಹರಿಸಲು ಯೋಜನೆ ಮಾಡಿದ್ದರು. ಅದರಂತೆ ರಬೀಜ್ ಅರಾಪತ್ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರನ್ನು ಕಿಡ್ನಾಪ್ ಮಾಡಲು ಪ್ಲಾನ್ ಮಾಡಿದರು ಇದಕ್ಕಾಗಿ ಓಎಲ್‍ಕ್ಸ್‍ನಲ್ಲಿ ಮಾರುತಿ 800 ಕಾರನ್ನು ಖರೀದಿ ಮಾಡಿದ್ದಾರೆ. ನಂತರ ಯುವಕನನ್ನು ಅಪಹರಿಸಿ ಕಾರಿನಲ್ಲಿ ಕೂರಿಸಿಕೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅವಲಹಳ್ಳಿ, ಯರ್ರಪ್ಪನಹಳ್ಳಿ ಸುತ್ತಮುತ್ತ ಸುತ್ತಿಸಿದ್ದಾರೆ. ಪೋಷಕರಿಗೆ ಕರೆ ಮಾಡಿ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಪೂರ್ವ ವಿಭಾಗದ ಪೊಲೀಸರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ಕು ಮಂದಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದು ರಬೀಜ್ ಅರಾಪತ್ ಅವರನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದೆ. ಪೂರ್ವ ವಿಭಾಗದ ಪೊಲೀಸರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಹಾಗೂ ಅಪರ ಪೊಲೀಸ್ ಆಯುಕ್ತ ಮುರುಗನ್ ಅವರು ಶ್ಲಾಘಿಸಿ ಬಹುಮಾನ ನೀಡಿ ಪ್ರಶಂಸಿಸಿದ್ದಾರೆ. ಪ್ರಮುಖ ಆರೋಪಿ ಮಾಸ್ಟರ್‍ಮೈಂಡ್ ಅಬ್ದುಲ್ ಫಹಾದ್ ಈ ಹಿಂದೆ 2018ರಲ್ಲಿ ಜನೀಫರ್ ಎಂಬುವರನ್ನು ಅಪಹರಣ ಮಾಡಿದ್ದು, ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Facebook Comments