ಮಕ್ಕಳ ಆಟಿಕೆ ಕಿಟ್ ಟೆಂಡರ್ ಗೋಲ್ಮಾಲ್ : ಸರ್ಕಾರದ ಬೊಕ್ಕಸಕ್ಕೆ 9 ಕೋಟಿ ಉಂಡೆನಾಮ..!

ಈ ಸುದ್ದಿಯನ್ನು ಶೇರ್ ಮಾಡಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಟೆಂಡರ್ ಗೋಲ್‍ಮಾಲ್ ಪ್ರಕರಣ… ಸರ್ಕಾರಕ್ಕೆ ಬರೋಬ್ಬರಿ 8 ರಿಂದ 9 ಕೋಟಿ ರೂ. ನಷ್ಟ… ಅಧಿಕಾರಿಗಳ ಧನದಾಹದಿಂದ ಅಸಹಾಯಕರಾಗಿರುವ ರಾಜ್ಯದ ಕೈಗಾರಿಕೋದ್ಯಮಿಗಳು… ಉದ್ಯೋಗವಿಲ್ಲದೆ ಹಪಹಪಿಸುತ್ತಿರುವ ನಿರುದ್ಯೋಗಿಗಳು… ಕಣ್ಮುಚ್ಚಿ ಕುಳಿತಿರುವ ಸರ್ಕಾರ… ಪ್ರತಿ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೂರ್ವ ಪ್ರಾಥಮಿಕ ಶಾಲಾ ಕಿಟ್ (ಮಕ್ಕಳ ಆಟದ ಸಾಮಾನುಗಳ ಕಿಟ್) ಸರಬರಾಜಿಗೆ ಟೆಂಡರ್ ಕರೆಯಲಾಗುತ್ತದೆ.

ಈ ಟೆಂಡರ್ ಕಳೆದ ಆರು ವರ್ಷಗಳಿಂದಲೂ ರಾಜ್ಯದ ಯಾವೊಬ್ಬ  ಉದ್ಯಮಿಗೂ ದೊರೆತಿಲ್ಲ. ತಾಂತ್ರಿಕ, ಆರ್ಥಿಕ ಎಲ್ಲ ಅರ್ಹತೆಗಳಿದ್ದರೂ ಈ ಟೆಂಡರ್ ದೊರೆಯದಂತೆ ಇಲಾಖೆಯ ಅಧಿಕಾರಿಗಳು ನಿಯಮಾವಳಿಗಳನ್ನು ರೂಪಿಸಿ ಹೊರ ರಾಜ್ಯದವರಿಗೆ ಸಿಗುವಂತೆ ಮಾಡುತ್ತಾರೆ. ಆ ರೀತಿ ಟೆಂಡರ್‍ನಲ್ಲಿ ಗೋಲ್‍ಮಾಲ್ ಮಾಡಿರುವುದರಿಂದ ಈ ಬಾರಿ ಸರ್ಕಾರಕ್ಕೆ 8 ರಿಂದ 9 ಕೋಟಿ ಯಷ್ಟು ನಷ್ಟವಾಗಿದೆ.

ಇದಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಅವರು ಉತ್ತರಿಸಬೇಕಿದೆ. ರಾಜ್ಯದ ಉದ್ಯಮಿಯೊಬ್ಬರು ಯಾವುದೇ ಕೆಲಸದ ಟೆಂಡರ್ ಪಡೆದು ಕೆಲಸ ನಿರ್ವಹಿಸಿದರೆ ವಿಫುಲ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ವಹಿವಾಟಿನಿಂದ ಉಂಟಾಗುವ ಲಾಭ, ತೆರಿಗೆ ಸರ್ಕಾರಕ್ಕೆ ಸಲ್ಲಿಕೆಯಾಗುತ್ತದೆ. ಜತೆಗೆ ಬರುವ ಜಿಎಸ್‍ಟಿ ಆದಾಯ ರಾಜ್ಯಕ್ಕೆ ಲಭಿಸುತ್ತದೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ಆಟಿಕೆ ಕಿಟ್ ತಯಾರಿಕೆ ಟೆಂಡರ್ ಗೋಲ್‍ಮಾಲ್‍ನಿಂದ ರಾಜ್ಯದ ಉದ್ಯಮಿಗಳಿಗೆ ಅವಕಾಶವಿಲ್ಲದಂತಾಗಿದೆ.

ಪ್ರತಿ ಬಾರಿ 8 ರಿಂದ 10 ಕೋಟಿಯಷ್ಟು ಹೆಚ್ಚು ಬೆಲೆಗೆ ಟೆಂಡರ್ ಆಗುತ್ತದೆ. ಅದೇ ನಮ್ಮ ರಾಜ್ಯದವರು ಹಾಕಿದರೆ ಸರ್ಕಾರಕ್ಕೆ 10 ಕೋಟಿಯಷ್ಟು ಹಣ ಉಳಿಯುತ್ತದೆ. ಅಲ್ಲದೆ ಜಿಎಸ್‍ಟಿ ಆದಾಯವೂ ಕೂಡ ನಮ್ಮ ರಾಜ್ಯಕ್ಕೆ ಬರುತ್ತದೆ. ಇದಾವುದೂ ನಮ್ಮ ಅಧಿಕಾರಿಗಳಿಗೆ ಬೇಕಾಗಿಲ್ಲ.  ದೆಹಲಿ ಮತ್ತು ಆಂಧ್ರ ಮೂಲದ ಉದ್ಯಮಿಗಳಿಗೆ ಟೆಂಡರ್ ಸಿಗುವಂತೆ ನಿಯಮಾವಳಿಗಳನ್ನು ಅಧಿಕಾರಿಗಳು ರೂಪಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ ಈ ಟೆಂಡರ್ ಸಿಗುತ್ತಿದೆ. ನಮ್ಮ ರಾಜ್ಯದವರಿಗೆ ಮಕ್ಕಳ ಆಟಿಕೆ ಕಿಟ್ ತಯಾರಿಕಾ ಟೆಂಡರ್ ಸಿಕ್ಕರೆ ಇದಕ್ಕೆ ಅಗತ್ಯವಾದ ಗೊಂಬೆ ಮತ್ತಿತರ ಪರಿಕರಗಳು ನಮ್ಮ ಚನ್ನಪಟ್ಟಣದಿಂದ ಖರೀದಿಸಬಹುದು.

ಗೊಂಬೆ ಉದ್ಯಮಕ್ಕೂ ಅನುಕೂಲವಾಗುತ್ತದೆ. ಅಧಿಕಾರಿಗಳು ಗುಣಮಟ್ಟ ಪರಿಶೀಲನೆ ಮಾಡಬಹುದು. ಆದರೆ, ಅನ್ಯ ರಾಜ್ಯಗಳಿಗೆ ಟೆಂಡರ್ ದೊರೆಯುತ್ತಿರುವುದರಿಂದ ಅವರು ಚೈನಾ ಉತ್ಪಾದಿತ ಗೊಂಬೆಗಳನ್ನು ಖರೀದಿ ಮಾಡುತ್ತಾರೆ. ಬೇರೆ ರಾಜ್ಯಗಳಿಗೆ ಹೋಗಿ ಅಧಿಕಾರಿಗಳು ಗುಣಮಟ್ಟ ಪರಿಶೀಲನೆ ಮಾಡಲು ಸಾಧ್ಯವಾಗುವುದಿಲ್ಲ.

ಅಲ್ಲದೆ, ಅನುತ್ಪಾದಕ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮಾಡಿದ ಗೊಂಬೆಗಳನ್ನು ಆಟಿಕೆ ಕಿಟ್‍ಗಳಲ್ಲಿ ನೀಡುವುದರಿಂದ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಮ್ಮಲ್ಲಾಗುವ ಉದ್ಯೋಗ ನಷ್ಟ, ಆರ್ಥಿಕ ನಷ್ಟ ಇದಾವುದೂ ನಮ್ಮ ಅಧಿಕಾರಿಗಳ ಗಮನಕ್ಕೆ ಬರುವುದಿಲ್ಲ. ಸ್ವ ಹಿತಾಸಕ್ತಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಅವರು ಕೆಲಸ ನಿರ್ವಹಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ನಿರಂತರವಾಗಿ ನಷ್ಟ ಉಂಟುಮಾಡುತ್ತಲೇ ಬಂದಿದ್ದಾರೆ. ಇದನ್ನು ಕೇಳುವವರು, ಹೇಳುವವರು ಯಾರೂ ಇಲ್ಲದಂತಾಗಿದೆ.

ಅಧಿಕಾರಿಗಳ ಕರಾಮತ್ತು: ಕಳೆದ ಬಾರಿಯ ಟೆಂಡರ್ ಮೊತ್ತ 33.4 ಕೋಟಿ. ಈ ಟೆಂಡರ್ ಹೊರರಾಜ್ಯದವರಿಗೆ ಹೋಗುವ ಹಾಗೆ ಕೆಲವು ಶರತ್ತುಗಳನ್ನು ವಿಧಿಸುತ್ತಾರೆ. ಇದರಲ್ಲಿ ಬರುವ ಐಟಂಗಳನ್ನು ಈ ಹಿಂದೆ ಇಷ್ಟೇ ಕೋಟಿಗೆ ಒಂದೇ ಸಿಂಗಲ್ ಆರ್ಡರ್‍ನಲ್ಲಿ ಮಾಡಿರಬೇಕು. ಅಂತಹ ಟೆಂಡರ್‍ದಾರರು ಮಾತ್ರ ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಕಂಡೀಷನ್ ಇರುತ್ತದೆ.
ಅಷ್ಟೇ ಅಲ್ಲ, ಇಲ್ಲಿ ಪ್ರೀ ಸ್ಕೂಲ್ ಎಂದು ಹಾಕಿ ದಾರಿ ತಪ್ಪಿಸುತ್ತಾರೆ. ಶಿಕ್ಷಣಕ್ಕೆ ಸಂಬಂಧಪಟ್ಟಿರುವುದರಿಂದ ಸಂಬಂಧಪಟ್ಟ ಉದ್ದಿಮೆಯವರು ಇದನ್ನು ಮಾಡಬೇಕು. ಆದರೆ, ಕಳೆದ ಮೂರು ವರ್ಷಗಳಿಂದ ಆಂಧ್ರ ಮೂಲದ ಸಂಸ್ಥೆಯೊಂದೇ ಇದನ್ನು ಮಾಡುತ್ತ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಟಿಪಿಪಿ ಕಾಯ್ದೆ-29(ಬಿ) ಪ್ರಕಾರ ಸಿಂಗಲ್ ಟೆಂಡರ್ ಆದಾಗ ಮರುಟೆಂಡರ್ ಕರೆಯಲು ಅವಕಾಶವಿರುತ್ತದೆ. ಆದರೆ, ಈ ಕಾಯ್ದೆಯನ್ನು ಅಧಿಕಾರಿಗಳು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ.  ಎಂಎಸ್‍ಎಂಇಯಲ್ಲಿರುವಂತೆ ನಮ್ಮ ರಾಜ್ಯದ ಉದ್ಯಮಿಗಳು ಬೇರೆ ರಾಜ್ಯದವರಿಗಿಂತ ಶೇ.15ಕ್ಕೂ ಹೆಚ್ಚು ದರ ನಮೂದಿಸಿದರೂ ಕೂಡ ಯಾವುದೇ ಟೆಂಡರ್‍ಗಳನ್ನು ನಮ್ಮ ರಾಜ್ಯದವರಿಗೆ ಕೊಡಬಹುದು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.ಇಂತಹ ಯಾವುದೇ ನಿಯಮಗಳಿಗೂ ಕೂಡ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ.

ಇದು ಒಂದು ಇಲಾಖೆಯ ಕಥೆಯಲ್ಲ, ಬಹುತೇಕ ಎಲ್ಲ ಇಲಾಖೆಗಳಲ್ಲೂ ಇದೇ ಕಥೆಯಾಗಿದೆ. ಇದಕ್ಕಾಗಿಯೇ ರಾಜ್ಯದಲ್ಲಿ ಕೈಗಾರಿಕೆಗಳ ಪರಿಸ್ಥಿತಿ ಅಧಃಪತನಕ್ಕೆ ಇಳಿದಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 8ನೆ ಸ್ಥಾನದಲ್ಲಿದ್ದ ಕರ್ನಾಟಕ ಕೈಗಾರಿಕಾ ಉದ್ಯಮ ಇದೀಗ 17ನೆ ಸ್ಥಾನಕ್ಕೆ ಕುಸಿದಿದೆ.  ರಾಜ್ಯದ ಉದ್ಯಮಿಗಳಿಗೆ ಸಹಕರಿಸಿ ಉದ್ಯೋಗ ಸೃಷ್ಟಿಸಬೇಕಾದ ಸಂದರ್ಭದಲ್ಲಿ ಅಧಿಕಾರಿಗಳು ಹೊರರಾಜ್ಯದವರೊಂದಿಗೆ ಕೈ ಜೋಡಿಸಿ ರಾಜ್ಯದ ಕೈಗಾರಿಕಾ ಕ್ಷೇತ್ರವನ್ನು ಅಧಃಪತನಕ್ಕೆ ತಳ್ಳುತ್ತಿದ್ದಾರೆ.

ಮಕ್ಕಳ ಆಟಿಕೆ ಕಿಟ್ ಸರಬರಾಜು ಸಂಬಂಧಿತ ಟೆಂಡರ್‍ನಲ್ಲಿ ಪಾಲ್ಗೊಂಡ ಐದು ಕಂಪೆನಿಗಳನ್ನು ತಾಂತ್ರಿಕ ಬಿಡ್‍ನಿಂದ ಹೊರಹಾಕಿ ಪ್ರತಿ ವರ್ಷ ಶೇ.35ರಷ್ಟು ಹೆಚ್ಚು ದರ ನಮೂದಿಸಿರುವ ಹೊರರಾಜ್ಯದ ಒಂದೇ ಕಂಪೆನಿಗೆ ಟೆಂಡರ್ ನೀಡುತ್ತಿರುವುದರಿಂದ ರಾಜ್ಯಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಸುಮಾರು 8 ರಿಂದ 9 ಕೋಟಿ ರೂ.ಗಳಷ್ಟು ನಷ್ಟಕ್ಕೆ ಹೊಣೆ ಯಾರು? ಇದಕ್ಕೆ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳು ಉತ್ತರಿಸುವರೇ? ರಾಜ್ಯದ ಜನರ ಹಿತಾಸಕ್ತಿ ಕಾಪಾಡುವರೇ?

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಈ ಹಂತದಲ್ಲಿ ಪ್ರತಿಯೊಂದು ಪೈಸೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಆಟಿಕೆ ಕಿಟ್ ಪೂರೈಸುವ ಟೆಂಡರ್ ಒಂದರಲ್ಲೇ 9 ಕೋಟಿಯಷ್ಟು ಬೊಕ್ಕಸಕ್ಕೆ ನಷ್ಟ ಉಂಟಾದರೆ ಬೇರೆ ಬೇರೆ ಇಲಾಖೆಯ ಟೆಂಡರ್‍ಗಳಲ್ಲಿ ಎಷ್ಟಾಗಿರಬಹುದು ಎಂದು ಊಹಿಸಲಸಾಧ್ಯ.

ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಗ್ಗೆ ಗಮನ ಹರಿಸಿ ಆಗುತ್ತಿರುವ ನಷ್ಟದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಮೂಲಕ ರಾಜ್ಯದ ಕೈಗಾರಿಕೆಗಳಿಗೆ, ಉದ್ಯಮಿಗಳಿಗೆ ಅವಕಾಶ ಸಿಗುವಂತೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತೆ ನೋಡಿಕೊಳ್ಳಬೇಕು.

Facebook Comments