ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಘಟಕ ಸ್ಥಾಪನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.20- ನಗರದ ಪ್ರತಿಷ್ಠಿತ ಕಿದ್ವಾಯಿ ಆಸ್ಪತ್ರೆಯಲ್ಲಿ ಬೋನ್ ಮ್ಯಾರೊ ಘಟಕ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಇನ್ಫೋಸಿಸ್ ಫೌಂಡೇಷನ್ ನೆರವಿನೊಂದಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ನಿರ್ಮಿಸಲಾದ ಐದು ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಬೋನ್‍ಮ್ಯಾರೋ ಘಟಕವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಇದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುವುದರ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಮಾಣದ ಹಣ ನೀಡಿ ಚಿಕಿತ್ಸೆ ಪಡೆಯುವುದು ನಿಲ್ಲಲಿದೆ ಎಂದರು. ಆಸ್ಪತ್ರೆ ನಿರ್ಮಿಸಿದರೂ ಸಿಬ್ಬಂದಿಗಳಲ್ಲದಿದ್ದರೆ ನಿರ್ವಹಣೆ ಕಷ್ಟವಾಗುತ್ತದೆ. ಕಿದ್ವಾಯಿಯಲ್ಲೂ ವೈದ್ಯರ ಕೊರತೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಜಯದೇವ, ಇಂದಿರಾಗಾಂಧಿ, ಸಂಜಯ್‍ಗಾಂಧಿ ಆಸ್ಪತ್ರೆಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಶಿಕ್ಷಣ ಆರೋಗ್ಯಕ್ಕೆ ಮೈತ್ರಿ ಸರ್ಕಾರ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಇನ್ಫೋಸಿಸ್ ಸಂಸ್ಥೆ ವಾರ್ಷಿಕ 400 ಕೋಟಿ ರೂ.ನಷ್ಟು ಸಾಮಾಜಿಕ ಸೇವೆಗೆ ವೆಚ್ಚ ಮಾಡುತ್ತಿದ್ದು, ಸರ್ಕಾರದ ಸಹಕಾರವೂ ಇದೆ ಎಂದು ಹೇಳಿದರು.

ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎಂ.ಮಂಜುನಾಥ್ ಅವರು ವೈದ್ಯರ ಮೇಲಿನ ಹಲ್ಲೆ ಕುರಿತಂತೆ ಪ್ರಸ್ತಾಪಿಸಿ ಕಾನೂನು ಬಿಗಿಗೊಳಿಸುವಂತೆ ಮನವಿ ಮಾಡಿದ್ದಾರೆ. ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳಲ್ಲಿ ತಮಿಳುನಾಡಿನಲ್ಲಿ ಆರು ವರ್ಷ ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು. ಕಾರವಾರ ಜಿಲ್ಲೆಯ ಮೇದಿನಿ ಎಂಬ ಗ್ರಾಮದ ರಸ್ತೆಯನ್ನು ಅಭಿವೃದ್ಧಿಪಡಿಸಲು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಮುಂದಾಗಿದ್ದಾರೆ. ಈ ಸಂಬಂಧ ಕಾರವಾರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಒಪ್ಪಿಗೆ ನೀಡಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಕಿದ್ವಾಯಿ ಆಸ್ಪತ್ರೆಗೆ ದಾನಿಗಳ ನೆರವು ಹರಿದು ಬರುತ್ತಿದೆ. ಉತ್ತರ ಕರ್ನಾಟಕದಲ್ಲೂ ಆಸ್ಪತ್ರೆಗಳನ್ನು ತೆರೆದು ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೋಗಿಗಳ ಕಷ್ಟಕ್ಕೆ ಮರುಗುತ್ತಾರೆ. ಹೀಗಾಗಿ ಆ ಭಾಗದಲ್ಲೂ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಮಾತನಾಡಿ, ಆರೋಗ್ಯ ಸೇವೆ ಜತೆಗೆ ಅನ್ನದಾತರ ಸೇವೆ ಮಾಡುವ ಮುಖ್ಯಮಂತ್ರಿ ನಮ್ಮವರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ತರೋಣ. ಸಿಬ್ಬಂದಿ ಕೊರತೆ ನೀಗಿಸೋಣ. ಜತೆಯಾಗಿ ಕಾರ್ಯನಿರ್ವಹಿಸೋಣ ಎಂದು ಕರೆ ನೀಡಿದರು. ಜಯದೇವ ಆಸ್ಪತ್ರೆ ನಿರ್ದೇಶಕ ಮಂಜುನಾಥ್ ಮಾತನಾಡಿ, ವೈದ್ಯರ ಮೇಲಿನ ಹಲ್ಲೆ ಪ್ರಕರಣ ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ವೈದ್ಯರ ಮೆಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕೆಂದು ಹೇಳಿದರು. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ನಮ್ಮ ತಂದೆ ವೈದ್ಯರಾಗಿದ್ದರು. ಹೀಗಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ನನಗೆ ವಿಶೇಷ ಪ್ರೀತಿ ಇದೆ ಎಂದರು.

ನಾವು ಮಾತನಾಡುವ ಬದಲು ಕೆಲಸ ಮಾಡಿ ತೋರಿಸಬೇಕು. ನಮ್ಮ ತಂದೆಯ ಕಾಲದಲ್ಲಿ ವೈದ್ಯರೆಂದರೆ ಭಯ-ಭಕ್ತಿ ಇತ್ತು. ವೈದ್ಯರಲ್ಲಿ ವಿಶ್ವಾಸ ಇರಬೇಕು. ವೈದ್ಯರು ಮತ್ತು ರೋಗಿಯ ನಡುವಿನ ಬಾಂಧವ್ಯ ಕಾಯಿಲೆ ಗುಣವಾಗಲು ಸಹಕಾರಿ. ಕೇವಲ ಕಟ್ಟಡದಿಂದ ರೋಗ ಗುಣವಾಗುವುದಿಲ್ಲ. ಉತ್ತಮ ವೈದ್ಯರಿಂದ ಮಾತ್ರ ರೋಗ ಗುಣವಾಗಲು ಸಾಧ್ಯ ಎಂದು ಹೇಳಿದರು.

ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ರಾಮಚಂದ್ರ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ಎಂಟು ಶಸ್ತ್ರ ಚಿಕಿತ್ಸಾ ಕೊಠಡಿಗಳಿವೆ. ಈಗ ಹೊಸದಾಗಿ ಐದು ಕೊಠಡಿಗಳು ಸೇರ್ಪಡೆಯಾಗಿರುವುದರಿಂದ ಯಾವ ಕ್ಯಾನ್ಸರ್ ರೋಗಿಯೂ ಶಸ್ತ್ರ ಚಿಕಿತ್ಸೆಗಾಗಿ ಕಾಯುವಂತಿಲ್ಲ. ದೇಶದ ಅತ್ಯುತ್ತಮ ಶಸ್ತ್ರ ಚಿಕಿತ್ಸಾ ಕೊಠಡಿ ಹೊಂದಿದ ಆಸ್ಪತ್ರೆ ಎಂಬ ಖ್ಯಾತಿಗೆ ಕಿದ್ವಾಯಿ ಪಾತ್ರವಾಗಿದೆ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ