ಚಿನ್ನಾಭರಣದ ಆಸೆಗೆ ವೃದ್ಧೆಯನ್ನು ಕೊಂದಿದ್ದ ತಂದೆ-ಮಗಳು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.5- ಸಾಲ ತೀರಿಸಲು ಚಿನ್ನಾಭರಣದ ಆಸೆಗೆ ಬಿದ್ದು ವೃದ್ದೆ ಕೊಲೆ ಮಾಡಿ ಆಭರಣಗಳನ್ನು ದೋಚಿದ್ದ ತಂದೆ ಮತ್ತು ಮಗಳನ್ನು ಬಾಣಸವಾಡಿ ಠಾಣೆ ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಮಸ್ವಾಮಿಪಾಳ್ಯ ಐಓಸಿ ಸರ್ಕಲ್ ಸಮೀಪದ ನಿವಾಸಿಗಳಾದ ಜಾನ್‍ಜೋಸೆಫ್(75) ಮತ್ತು ಮಗಳು ಮರ್ಲಿನ್(48) ಬಂಧಿತರು. ಇಲ್ಲಿನ ನಿವಾಸಿ ಕಾಂತಮ್ಮ(70) ಎಂಬುವರು ಮಗಳು ಮಂಜುಳಾ(45) ಅವರ ಜೊತೆ ನೆಲೆಸಿದ್ದರು.

ಇವರ ಮನೆಯ ಹಿಂಭಾಗದಲ್ಲಿ ಆರೋಪಿಗಳಾದ ಜಾನ್ ಜೋಸೆಫ್ ಮತ್ತು ಮಗಳು ಮರ್ಲಿನ್ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಇವರಿಬ್ಬರು ಒಂದೂವರೆ ಲಕ್ಷ ರೂ.ಗಳನ್ನು ಬೇರೆಯವರಿಂದ ಸಾಲ ಮಾಡಿಕೊಂಡಿದ್ದರು.

ಸಾಲ ತೀರಿಸುವ ಒತ್ತಡದಲ್ಲಿದ್ದ ಇವರು ವೃದ್ಧೆ ಕೊಲೆ ಮಾಡಿ ಆಭರಣ ದೋಚಲು ಸಂಚು ರೂಪಿಸಿದ್ದರು.  ಅದರಂತೆ ಸೆ.2ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆರೋಪಿ ಮರ್ಲಿನ್ ವೃದ್ದೆಯ ಮಗಳಾದ ಮಂಜುಳಾ ಅವರನ್ನು ಆಧಾರ್ ಕಾರ್ಡ್ ಮಾಡಿಸುವ ನೆಪ ಹೇಳಿ ಹೊರಗೆ ಕರೆದುಕೊಂಡು ಹೋಗಿದ್ದಾಳೆ.

ಇತ್ತ ಜಾನ್‍ಜೋಸೆಫ್ ತನ್ನ ಯೋಜನೆಯಂತೆ ಬೆಳಗ್ಗೆ 10.30ರ ಸುಮಾರಿಗೆ ವೃದ್ಧೆಯ ಮನೆಯೊಳಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ ಬಾಯಿ ಮತ್ತು ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.  ನಂತರ ಮಗಳು ಮರ್ಲಿನ್‍ಳನ್ನು ಕರೆಸಿಕೊಂಡು ಇಬ್ಬರು ಸೇರಿ ಅವರ ಮೈಮೇಲಿದ್ದ 50 ಗ್ರಾಂ ತೂಕದ ನಾಲ್ಕು ಬಳೆಗಳು, ಒಂದು ಜೊತೆ ಕಿವಿಯೋಲೆ ಬಿಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.

ದೋಚಿದ್ದ ಆಭರಣಗಳನ್ನು ಅಂದೇ ಮಧ್ಯಾಹ್ನ ಬಾಣಸವಾಡಿಯ ಮಾರುತಿ ಸೇವಾನಗರದಲ್ಲಿರುವ ಅಟ್ಟಿಕಾಗೋಲ್ಡ್ ನಲ್ಲಿ 1,85,000 ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಾಣಸವಾಡಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ 24 ಗಂಟೆಯೊಳಗೆ ತಂದೆ-ಮಗಳನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments