7 ಮಂದಿಯನ್ನು ಸುಟ್ಟು ಕೊಂದಿದ್ದ ಬೋಜ ಶವವಾಗಿ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಡಿಕೇರಿ, ಏ.6- ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾಲ್ವರು ಮಕ್ಕಳು ಸೇರಿದಂತೆ 7 ಮಂದಿ ಸಾವಿಗೆ ಕಾರಣನಾಗಿದ್ದ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ. ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದ ಬೋಜ (55) ಶವವಾಗಿ ಪತ್ತೆಯಾಗಿರುವ ಆರೋಪಿ. ಘಟನೆ ಬಳಿಕ ಆರೋಪಿ ಬೋಜ ನಾಪತ್ತೆಯಾಗಿದ್ದನು. ಪೊನ್ನಂಪೇಟೆ ಠಾಣೆ ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು. ಈ ನಡುವೆ ಗದ್ದೆಯಲ್ಲಿ ಬೋಜನ ಶವ ಕಂಡು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ದಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಶವ ಆರೋಪಿ ಬೋಜನದೇ ಎಂಬುದನ್ನು ಖಚಿತಪಡಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿ ಬೋಜ ಅಂದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೆ ಆತ ಹೇಗೆ ಸತ್ತಿದ್ದಾನೆಂಬುದು ಗೊತ್ತಾಗಲಿದೆ.

# ಘಟನೆ ಹಿನ್ನೆಲೆ:

ಸೊಡ್ಲೂರು ಗ್ರಾಮದಲ್ಲಿ ವಾಸವಾಗಿದ್ದ ಬೋಜ ಮತ್ತು ಬೇಬಿ ದಂಪತಿ ನಡುವೆ ಜಗಳವಾಗಿದ್ದು, ಪತಿಯ ಕಿರುಕುಳದಿಂದ ಬೇಸತ್ತಿದ್ದ ಬೇಬಿ ಮುಗುಟಗೇರಿ ಗ್ರಾಮದಲ್ಲಿರುವ ಸಹೋದರನ ಮನೆಗೆ ಬಂದು ಅಲ್ಲೇ ವಾಸವಾಗಿದ್ದರು. ಮನೆಗೆ ವಾಪಸ್ ಬರುವಂತೆ ಬೋಜ ಕರೆದರೂ ಬೇಬಿ ಹೋಗಿರಲಿಲ್ಲ ಎನ್ನಲಾಗಿದೆ. ಇದೇ ಕೋಪಕ್ಕೆ ಏ.3ರಂದು ನಸುಕಿನ ಜಾವ ಇವರ ಮನೆ ಬಳಿ ಬಂದು ಹಿಂಬಾಗಿಲು ಹಾಗೂ ಮುಂಬಾಗಿಲಿನ ಚಿಲಕ ಹಾಕಿದ್ದಾನೆ. ನಂತರ ಮನೆ ಮೇಲೆ ಹತ್ತಿ ಹೆಂಚು ತೆಗೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದನು.

ಬೆಂಕಿಯು ಕ್ಷಣಾರ್ಧದಲ್ಲಿ ಮನೆಯೆಲ್ಲ ವ್ಯಾಪಿಸಿ ಮನೆಯೊಳಗಿದ್ದವರು ಹೊರಗೆ ಬರಲು ಸಾಧ್ಯವಾಗದೆ ಬೇಬಿ, ಸೀತಾ ಮತ್ತು ಬಾಲಕಿ ಪ್ರಾರ್ಥನಾ ಸ್ಥಳದಲ್ಲೇ ಸಜೀವ ದಹನವಾಗಿದ್ದನು. ಬೇರೆ ಕೊಠಡಿಯಲ್ಲಿ ಮಲಗಿದ್ದ ಮಂಜ ಮತ್ತು ತೋಲ ಎಂಬುವವರು ಹೇಗೋ ಹೊರಗೆ ಬಂದು, ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಪ್ರಕಾಶ್, ವಿಶ್ವಾಸ್ ಹಾಗೂ ವಿಶ್ವಾಸ ಎಂಬ ಮಕ್ಕಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾಗ್ಯ ಎಂಬ ಮಹಿಳೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ಪೊನ್ನಂಪೇಟೆ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ದಂಪತಿ ನಡುವಿನ ಜಗಳದಿಂದಾಗಿ ಏಳು ಜೀವಗಳು ಬೆಂಕಿಗೆ ಬಲಿಯಾಗಿರುವುದು ವಿಪರ್ಯಾಸವೇ ಸರಿ. ವಿಧಿಯ ಆಟ ಬಲ್ಲವರ್ಯಾರು. ಇಂತಹದ್ದೊಂದು ಭೀಕರ ದುರಂತ ನಡೆದೇ ಹೋಗಿದೆ.

Facebook Comments