ಬಜ್ಜಿಗಾಗಿ ಜಗಳವಾಡಿ ಪ್ರಾಣ ಕಳೆದುಕೊಂಡ ಕುಡುಕ..!

ಈ ಸುದ್ದಿಯನ್ನು ಶೇರ್ ಮಾಡಿ

ಪಿರಿಯಾಪಟ್ಟಣ, ಡಿ.12- ಬಾರ್‍ನಲ್ಲಿ ಮದ್ಯಪಾನ ಮಾಡಿ ಹೊರಗೆ ಬಂದು ಬಜ್ಜಿ ತಿನ್ನುವ ವಿಷಯದಲ್ಲಿ ಮಹಿಳೆಯೊಂದಿಗೆ ಜಗಳವಾಡಿದ್ದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೊಪ್ಪದ ಲಕ್ಷ್ಮಿ ಬಾರ್ ಬಳಿ ನಡೆದಿದೆ. ಮೃತನನ್ನು ಮಡಿಕೇರಿ ಬಳಿಯ ಮಹದೇವ ನಾಯಕ ಎಂದು ತಿಳಿದುಬಂದಿದೆ.

ಈ ಸಂಬಂಧ ಶಿವಕುಮಾರ್ ಮತ್ತು ಸುರೇಶ್ ಎಂಬುವವರನ್ನು ಬಯಲುಕುಪ್ಪೆ ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಕಳೆದ ಮೂರು ದಿನಗಳ ಹಿಂದೆ ಮಹದೇವ ನಾಯಕ ಲಕ್ಷ್ಮಿ ಬಾರ್‍ನಲ್ಲಿ ಮದ್ಯಪಾನ ಮಾಡಿ ಹೊರಗೆ ಬಂದಾಗ ಹತ್ತಿರದಲ್ಲೇ ಇರುವ ಬೋಂಡ ಅಂಗಡಿ ಬಳಿ ಬಂದಿದ್ದಾನೆ.

ಅಲ್ಲಿದ್ದ ಮಹಿಳೆ ಜತೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆಸಿದಾಗ ಆಕೆ ಮಹದೇವ್ ಮೇಲೆ ಜಗ್‍ನಿಂದ ನೀರು ಎರಚಿ ಅಲ್ಲಿಂದ ಹೋಗುವಂತೆ ಬೈಯ್ದಿದ್ದಾರೆ. ಇದರಿಂದ ಮಹದೇವನಾಯಕ ಮತ್ತಷ್ಟು ಕೆರಳಿ ಆಕೆ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ಕಂಡ ಸ್ಥಳೀಯರು ಆತನನ್ನು ಬಿಡಿಸಲು ಮುಂದಾದರೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಈ ವೇಳೆ ಶಿವಕುಮಾರ್ ಮತ್ತು ಸುರೇಶ್ ಎಂಬುವವರು ತಂಟೆ ಮಾಡುತ್ತಿದ್ದ ಮಹದೇವನಾಯಕನನ್ನು ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಆತ ಅಸ್ವಸ್ಥಗೊಂಡಾಗ ಸ್ಥಳೀಯರು ಆತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಈತನ ಕುಟುಂಬ ಸದಸ್ಯರು ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬಯಲುಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments