ಕಿರಿಕ್ ಕೊರಿಯಾದಿಂದ ಮತ್ತೆ ರಾಕೆಟ್, ಮಾರಕ ಶಸ್ತ್ರಾಸ್ತ್ರ ಪರೀಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಮೇ 5- ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಮತ್ತೆ ಅಪಾಯಕಾರಿ ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸಿ ಆತಂಕದ ವಾತಾವರಣ ಸೃಷ್ಟಿಸಿದೆ. ಮೊನ್ನೆಯಷ್ಟೇ ಅಗಾಧ ಸಾಮಥ್ರ್ಯದ ಶಸ್ತ್ರಾಸ್ತ್ರ ಪರೀಕ್ಷಿಸಿದ್ದ ಉತ್ತರ ಕೊರಿಯಾ ನಿನ್ನೆ ನಡೆದ ಸಮರ ತಾಲೀಮು ನಂತರ ರಾಕೆಟ್ ಮತ್ತು ಪ್ರತಿತಂತ್ರ ಮಾರ್ಗದರ್ಶಿ ಶಸ್ತ್ರಾಸ್ತ್ರಗಳ (ಟ್ಯಾಕ್ಟಿಕಲ್ ಗೈಡೆಡ್ ವೆಪನ್ಸ್) ಪರೀಕ್ಷಾರ್ಥ ಪ್ರಯೋಗ ನಡೆಸಿತು. ಇಡೀ ಪ್ರಕ್ರಿಯೆಯನ್ನು ಅಧ್ಯಕ್ಷ ಕಿಮ್ ಖುದ್ದಾಗಿ ವೀಕ್ಷಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಜೊತೆ ಅಣ್ವಸ್ತ್ರ ನಿಶಸ್ತ್ರೀಕರಣ ಮಾತುಕತೆಗೆ ಮತ್ತೊಂದು ಸುತ್ತಿನ ವೇದಿಕೆ ಸಜ್ಜಾಗುತ್ತಿರುವಾಗಲೇ ಉತ್ತರ ಕೊರಿಯಾದ ಈ ಕ್ರಮ ಮುಂದೇನು ಎಂಬ ಆಘಾತಕಾರಿ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಆಗಾಗ ವಿನಾಶಕಾರಿ ಕ್ಷಿಪಣಿಗಳು ಮತ್ತು ಅಣ್ವಸ್ತ್ರ ಸಾಮಥ್ರ್ಯದ ರಾಕೆಟ್‍ಗಳನ್ನು ಪರೀಕ್ಷಿಸಿ ಏಷ್ಯಾ ಖಂಡ ಮತ್ತು ಅಮೆರಿಕಕ್ಕೆ ತಲೆನೋವಾಗಿದ್ದ ಉತ್ತರ ಕೊರಿಯಾ, ನಂತರ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ತನ್ನ ಬಳಿ ಇರುವ ಅಣ್ವಸ್ತ್ರಗಳನ್ನು ತ್ಯಜಿಸುವುದಾಗಿ ಹೇಳಿತ್ತು.

ಈ ಸಂಬಂಧ ಸಿಂಗಪುರ್‍ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ನಡುವೆ ನಡೆದ ಮಹತ್ವದ ಶೃಂಗಸಭೆ ಫಲಪ್ರದವಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದು, ಕೊರಿಯಾ ಮೇಲೆ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕಿತ್ತು.

ಈ ಭಿನ್ನಾಭಿಪ್ರಾಯಗಳ ನಡುವೆ ಇತ್ತೀಚೆಗೆ ವಿಯೆಟ್ನಾಂನಲ್ಲಿ ನಡೆದ ಎರಡನೇ ಸುತ್ತಿನ ಮಾತುಕತೆ ವೇಳೆ ಅಮೆರಿಕ ಅಧ್ಯಕ್ಷರು ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ತಮ್ಮ ನಿಲುವುಗಳಿಗೆ ಬದ್ಧರಾದ ಕಾರಣ ಸಂಧಾನ ಯತ್ನ ಮುರಿದು ಬಿದ್ದಿತು.  ಈಗ ಮೂರನೇ ಸುತ್ತಿನ ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಇದೇ ವೇಳೆ ಉತ್ತರ ಕೊರಿಯಾ ಪುನಃ ಮಾರಕ ಶಸ್ತ್ರಾಸ್ತ್ರಗಳನ್ನು ಪರೀಕ್ಷೆಗೆ ಒಳಪಡಿಸಿ ಆತಂಕ ಸೃಷ್ಟಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin