ಮೊದಲ ಬಾರಿ ಮಾಸ್ಕ್ ಧರಿಸಿದ ಸರ್ವಾಧಿಕಾರಿ ಕಿಮ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 13- ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೋವಿಡ್ ಪ್ರಕರಣ ವರದಿಯಾಗುತ್ತಿದ್ದಂತೆ ದೇಶದ ನಗರ ಪ್ರದೇಶಗಳಲ್ಲಿ ಲಾಕ್‍ಡೌನ್ ಘೋಷಣೆ ಮಾಡಿರುವ ಅಧ್ಯಕ್ಷ ಕಿಮ್ ಜಂಗ್-ಉನ್, ಪ್ರಥಮವಾಗಿ ಮಾಸ್ಕ್ ಧರಿಸಿ ಸಭೆಯಲ್ಲಿ ಭಾಗವಹಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ವಿಶ್ವದ ಎಲ್ಲಾ ದೇಶಗಳನ್ನು ತಲ್ಲಣಗೊಳಿಸಿದೆ. ಅಪಾರ ಪ್ರಮಾಣದ ಸಾವು ನೋವುಗಳಾಗಿವೆ. ಆದರೆ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿರಲಿಲ್ಲ. ಮೊನ್ನೆ ಒಂದು ಪ್ರಕರಣ ವರದಿಯಾಗುತ್ತಿದ್ದಂತೆ ಸೋಂಕು ನಿಯಂತ್ರಣಕ್ಕೆ ಕಿಮ್ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ.

ಲಾಕ್‍ಡೌನ್ ಜೊತೆಗೆ ಕೆಲಸದ ಸ್ಥಳಗಳಲ್ಲಿ ಪ್ರತ್ಯೇಕತೆ ಪಾಲನೆಗೆ ಆದೇಶಿಸಿದ್ದಾರೆ. 26 ದಶ ಲಕ್ಷ ಜನ ಸಂಖ್ಯೆ ಹೊಂದಿರುವ ಉತ್ತರ ಕೊರಿಯಾದಲ್ಲಿ ಆರೋಗ್ಯ ವ್ಯವಸ್ಥೆ ದುರ್ಬಲವಾಗಿದೆ. ಲಸಿಕೆಯ ಬಗ್ಗೆಯೂ ಅಸ್ಪಷ್ಟತೆ ಇದೆ. ಬಹುತೇಕ ಮಂದಿ ಲಸಿಕೆ ಪಡೆದಿರಬಹುದು ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಸೋಂಕು ಹರಡಿದ್ದರೆ ಹೆಚ್ಚಿನ ಅಪಾಯವಾಗಲಿದೆ ಎಂಬ ಕಾರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಮೊದಲ ಬಾರಿಗೆ ಕಿಮ್ ಮಾಸ್ಕ್ ಧರಿಸಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಪೋಟೋ ವೈರಲ್ ಆಗಿದೆ.

Facebook Comments