ಆಸ್ಪತ್ರೆಯಲ್ಲಿ ಚಡಪಡಿಸುತ್ತಿದ್ದ ಕಿಮ್ಮನೆ, ಅದೇಕೋ ಮನಸ್ಸಿಗೆ ತುಂಬಾ ಹಿಡಿಸಿದರು

ಈ ಸುದ್ದಿಯನ್ನು ಶೇರ್ ಮಾಡಿ

ಆಧುನೀಕತೆ ಭರಾಟೆಯ ಕಾಲಘಟ್ಟದಲ್ಲಿ, ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಪರೂಪದಲ್ಲಿ ಅಪರೂಪದಂತಹ ವ್ಯಕ್ತಿಗಳ ವ್ಯಕ್ತಿತ್ವದ ಅನಾವರಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅದು ಸರಳತೆಯ ಸಾಕಾರಮೂರ್ತಿ, ಗಾಂ ತತ್ವಗಳನ್ನು ಪ್ರತಿಪಾದಿಸುತ್ತಿರುವ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ತಮ್ಮ ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳಲೆಂದು ಖುದ್ದು ಅವರೇ ವಹಿಸಿದ ಕಾಳಜಿಯ ಬಗ್ಗೆ ಇಂದಿರಾನಗರದಲ್ಲಿ ವಾಸವಾಗಿರುವ ವೈದ್ಯ ವಿನಯ್‍ರಾವ್ ಅವರು ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಬರೆದುಕೊಂಡಿರುವ ವಿಷಯ ವೈರಲ್ ಆಗಿದೆ.
ಈಗೊಂದು ವಾರದ ಹಿಂದಿನ ಮಾತಿದು.

ಅಮ್ಮನಿಗೆ ಅನಾರೋಗ್ಯ ಕಾಡಿ ಮನೆಯವರೆಲ್ಲ ತಳಮಳಿಸಿಹೋಗಿದ್ದಾವು. ವಯಸ್ಸಾಗಿದೆ, ಕೊರೋನಾ ಕಾಲಘಟ್ಟ ಬೇರೆ. ಆಸ್ಪತ್ರೆ ಅಂದ ಕೂಡಲೇ ಕೈಕಾಲು ನಡುಗುವಂಥ ಸಂದರ್ಭ ಈಗಿನದ್ದು. ಆದರೆ ಹಾಗಂತ ಸುಮ್ಮನಿರಲಾದೀತೆ? ಅಮ್ಮ ಅಮ್ಮನೇ… ಹೆಬ್ಬಾಳದ ಆಸ್ಪತ್ರೆಗೆ ದಾಖಲು ಮಾಡಿದೆವು. ಪರೀಕ್ಷೆಗಳೆಲ್ಲೇ ಆಗಿ ಶಸ್ತ್ರಚಿಕಿತ್ಸೆಯ ದಿನಾಂಕವೂ ನಿಗದಿಯಾಯ್ತು. ಅಮ್ಮನನ್ನು ಎರಡನೇ ಮಹಡಿಯಲ್ಲಿದ್ದ ಆಪರೇಷನ್ ಥಿಯೇಟರಿಗೆ ಕರೆದೊಯ್ದರು. ನಾನು ಅಲ್ಲೇ ಎದುರಿಗಿದ್ದ ಕುರ್ಚಿಯ ಮೇಲೆ ಕೂತೆ.

ಕಾರಿಡಾರಿನಲ್ಲಿ ಹೆಚ್ಚು ಜನರಿರಲಿಲ್ಲ. ಇದ್ದದ್ದು ಇಬ್ಬರೇ ಒಬ್ಬ ನಾನು, ಇನ್ನೊಬ್ಬರು ಬಿಳಿ ಉಡುಪು ಧರಿಸಿದ್ದ ಅರವತ್ತು ಅರವತ್ತೈದರ ಪ್ರಾಯವಿರಬಹುದಾದ ಹಿರಿಯರು. ಪರಿಚಿತ ಮುಖ ಅನ್ನಿಸಿತು. ಆದರೆ ಎಲ್ಲೆಂದು ನೆನಪಾಗವಲ್ಲದು. ಮೌನವಾಗಿ ಗಂಭೀರವಾಗಿ ಕೂತಿದ್ದರು. ನನಗೆ ನನ್ನದೇ ಒತ್ತಡ ಹೆಚ್ಚಾಗಿತ್ತಾದ್ದರಿಂದ ಅವರ ಬಗ್ಗೆ ಹೆಚ್ಚು ಹುಡುಕಹೋಗದೆ ಅಮ್ಮನ ಸುದ್ದಿಗಾಗಿ ಕಾಯುತ್ತಾ ಕೂತೆ. ಸಂಜೆ ಹೊತ್ತಿಗೆ ವರ್ತಮಾನ ಬಂತು, ಅಮ್ಮ ಔಟಾಫ್ ಡೇಂಜರ್. ಆಪರೇಷನ್ ಸಕ್ಸಸ್ ಆಗಿತ್ತು!

ಅಮ್ಮನಿಗೆ ಪ್ರಜ್ಞೆ ಬಂದು ಡಾಕ್ಟರು ನನಗೆ ಹೇಳಿಕಳಿಸುವ ತನಕ ನನಗೂ ಬೇರೆ ಕೆಲಸವಿರಲಿಲ್ಲ. ಮನೆಗೆ ಹೋಗಿ ತಾಸಿನ ನಂತರ ಮರಳಿ ಬಂದೆ. ಇನ್ನೂ ಸ್ವಲ್ಪ ಹೊತ್ತು ಕಾಯಿರಿ, ಆಮೇಲೆ ಹೋಗಿ ನೋಡಬಹುದು ಅಂದರು ಸಿಸ್ಟರ್, ಕೂತೆ. ಹಾಗೇ ಪಕ್ಕಕ್ಕೆ ತಿರುಗಿ ನೋಡಿದರೆ ಆ ಹಿರಿಯರು ಈಗಲೂ ಹಾಗೆ ಅದೇ ಜಾಗದಲ್ಲಿ ಸ್ಥಿರವಾಗಿ ಕುಳಿತೇ ಇದ್ದಾರೆ! ತುಂಬಾ ಹೊತ್ತಿನ ತಿಣುಕಾಟದ ನಂತರ ನನಗೆ ಅವರ್ಯಾರು ಎಂಬ ಸುಳಿವು ಸಿಕ್ಕಿಹೋಯ್ತು. ಇವರು ಮಂತ್ರಿಯಾಗಿದ್ದವರಲ್ಲವೆ? ಟಿವಿಯಲ್ಲಿ ಪೇಪರಿನಲ್ಲಿ ನೋಡಿದ್ದೇನೆ… ಏನಿವರ ಹೆಸರು?

ಗೂಗಲ್ಲಿನಲ್ಲಿ ಜಾಲಾಡಿದಾಗ ಗುರುತು ಸಿಕ್ಕಿತು- ಕಿಮ್ಮನೆ ರತ್ನಾಕರ್! ಮೈತ್ರಿ ಸರ್ಕಾರವೋ ಅದರ ಹಿಂದಿನ ಸರ್ಕಾರದಲ್ಲೂ ಶಿಕ್ಷಣಮಂತ್ರಿಯಾಗಿದ್ದವರು. ಎರಡು ಬಾರಿ ಶಾಸಕರೂ ಆಗಿದ್ದವರು. ಈಗಲೂ ಸಕ್ರಿಯ ರಾಜಕಾರಣಿ. ರಾಜಕಾರಣಿಗಳೆಂದರೆ ಪಟಾಲಮ್ಮು, ಅನುಯಾಯಿಗಳು, ಜೈಕಾರ, ದೌಲತ್ತು ಅನ್ನೋದು ನನ್ನೊಬ್ಬನದ್ದಲ್ಲ, ಬಹುತೇಕರ ಅಭಿಪ್ರಾಯ.

ಅದು ಸತ್ಯವೂ ಕೂಡ. ಆದರೆ ಶಾಸ್ತ್ರಕ್ಕೂ ಅವತ್ತು ಅವರ ಜೊತೆ ಒಬ್ಬೇ ಒಬ್ಬ ಸಹಚರನಿರಲಿಲ್ಲ. ತಾನು ಮಾಜಿ ಮಂತ್ರಿ ಎಂಬ ಯಾವ ಡೌಲು ಅವರಲ್ಲಿ ಕಾಣಸಿಗಲಿಲ್ಲ. ರಾಜಕಾರಣಿಗಳೆಂದರೆ ಹೀಗೂ ಇರ್ತಾರ?! ಎಂದು ಆಶ್ಚರ್ಯಪಡುತ್ತಲೇ ಮೆಲ್ಲಗೆ ಹೋಗಿ ಮಾತನಾಡಿಸುವ ಪ್ರಯತ್ನಮಾಡಿದೆ.

ಗೊತ್ತಾದದ್ದೇನೆಂದರೆ, ಕಿಮ್ಮನೆ ರತ್ನಾಕರ್ ಅವರ ಪತ್ನಿಯವರಿಗೆ ಬೆನ್ನುಹುರಿ ಚಿಕಿತ್ಸೆ ನಡೆಯುತ್ತಿತ್ತು. ಬೆಳಿಗ್ಗೆ ಐದಕ್ಕೆ ಪತ್ನಿಯನ್ನು ಕರೆದುಕೊಂಡು ಬಂದು ಅಡ್ಮಿಟ್ ಮಾಡಿಸಿದ್ದಾರೆ. ಅಲ್ಲಿಂದ ಅದು ಮುಗಿಯುವ ತನಕವೂ ಇವರು ಆ ಜಾಗ ಬಿಟ್ಟು ಕದಲಿಲ್ಲ.
ನಂಬ್ತೀರೋ ಬಿಡ್ತೀರೋ, ಆಪರೇಷನ್ನಿನ ಪ್ರೊಸೀಜರುಗಳೆಲ್ಲ ಮುಗಿದು ಅವರ ಪತ್ನಿ ಆರಾಮಾಗಿರುವ ವರ್ತಮಾನ ಬಂದಾಗ ಸಮಯ ರಾತ್ರಿ ಹತ್ತು ಗಂಟೆ! ಈ ಪುಣ್ಯಾತ್ಮ ಅಲ್ಲೇ ಕೂತಿದ್ದರು.

ಮಧ್ಯೆ ಮಧ್ಯೆ ಒಂದೆರಡು ಬಾರಿ ಫೋನ್ ಮಾಡಿರಬಹುದಷ್ಟೇ. ಯಾರೋ ಹತ್ತಿರದವರಿಗೆ ಕಾಲ್ ಮಾಡಿ ಸಂಕೋಚದಿಂದಲೇ ಸ್ವಲ್ಪ ಹಣ ಅಡ್ಜೆಸ್ಟ್ ಮಾಡಿಕೊಡೋಕಾಗುತ್ತಾ? ಬೆಂಗಳೂರಲ್ಲಿದ್ದೀನಿ. ಊರಿಗೆ ಹೋದಮೇಲೆ ಕಳಿಸಿಕೊಡ್ತೀನಿ ಅಂತ ಕೇಳಿಕೊಳ್ಳುತ್ತಿದ್ದರು. (ಸಾರಿ ಸರ್, ನಿಮ್ಮ ಖಾಸಗಿ ಮಾತುಗಳನ್ನು ಕದ್ದು ಕೇಳಿಸಿಕೊಂಡಿದ್ದಕ್ಕೆ ಮತ್ತು ಅದನ್ನು ಇಲ್ಲಿ ಬರೆದಿರುವುದಕ್ಕೆ) ಬರೀ ಗ್ರಾಮ ಪಂಚಾಯ್ತಿ ಮೆಂಬರ್ ಆದವನೇ ಲಕ್ಷಲಕ್ಷಗಳ ಲೆಕ್ಕದಲ್ಲಿ ಡೀಲ್ ಮಾತಾಡುವಾಗ, ಮಕ್ಕಳು ಮರಿಗೆ ಆಸ್ತಿಮಾಡಿಕೊಂಡು ಕೂತಿರುವಾಗ…ಮಂತ್ರಿಯಾಗಿ ಅಧಿಕಾರ ಮಾಡಿದವರಿವರು, ರಾಜಕಾರಣದಲ್ಲಿದ್ದೂ ಹೀಗೆ ಸಂತನಂತೆ ಉಳಿದುಕೊಂಡಿರಲು ಸಾಧ್ಯವೇ? ನಿಜಕ್ಕೂ ಇವರು ಭ್ರಷ್ಟತೆಯ ಕಲೆ ಅಂಟಿಸಿಕೊಳ್ಳದ ಪ್ರಾಮಾಣಿಕರಾ? ನನ್ನ ಗೆಳೆಯನೊಬ್ಬ ಆರು ವರ್ಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ತಹಶೀಲ್ದಾರನಾಗಿದ್ದ.

ಈಗವರು ಉತ್ತರ ಕರ್ನಾಟಕದಲ್ಲಿ ಪೋಸ್ಟಿಂಗನ್‍ಲ್ಲಿದ್ದಾರೆ. ಕುತೂಹಲಕ್ಕೆ ಫೋನ್ ಮಾಡಿ ಕಿಮ್ಮನೆ ರತ್ನಾಕರ್ ಬಗ್ಗೆ ವಿಚಾರಿಸಿದೆ. ಅವರು ಹೇಳಿದ ಮಾತು ಕೇಳಿ ನನಗೆ ಮಾತೇ ಹೊರಡಲಿಲ್ಲ. ಯಾಕೆಂದರೆ, ಹತ್ತು ವರ್ಷ ಶಾಸಕರಾಗಿದ್ದರೂ, ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರೂ, ಅದರಿಂದ ವೈಯುಕ್ತಿಕವಾಗಿ ಇವರೇನು ಲಾಭ ಮಾಡಿಕೊಂಡಿಲ್ಲ.

ಹಿಂದಿನ ಚುನಾವಣೆಗಾಗಿ ಮಾಡಿಕೊಂಡ ಸಾಲವನ್ನೇ ಇವತ್ತಿಗೂ ಕಂತಿನ ರೂಪದಲ್ಲಿ ಕಟ್ಟಿ ತೀರಿಸುತ್ತಿದ್ದಾರಂತೆ! ಅದು ಸಾಲದೆಂಬಂತೆ ವಿಧಾನಸಭಾ ಸದಸ್ಯರಿಗೆ ನೀಡುವ ನಿವೇಶನವನ್ನೂ ಅಗತ್ಯವಿಲ್ಲ, ಎಂದು ವಿನಯಪೂರ್ವಕವಾಗಿ ತಿರಸ್ಕರಿಸಿದ್ದಾರಂತೆ! ಗೆಳೆಯ ಹೇಳುತ್ತಿದ್ದ ಮಾತುಗಳನ್ನು ಕೇಳಿ ನನ್ನ ಕಿವಿ ನನಗೇ ನಂಬಲಾಗಲಿಲ್ಲ.

ಆಪರೇಷನ್ ಆದ ನಂತರ ಅಮ್ಮನನ್ನು ನೋಡಿಕೊಂಡು ನಾನೊಂದು ವಾರ್ಡಿನಲ್ಲಿ, ಹೆಂಡತಿಯನ್ನು ಆರೈಕೆ ಮಾಡುತ್ತಾ ಕಿಮ್ಮನೆಯವರೊಂದು ವಾರ್ಡಿನಲ್ಲಿ ಮೂರಾಲ್ಕು ದಿನ ಇದ್ದೇವು. ಸರ್ ನೀವು ಕಿಮ್ಮನೆ ರತ್ನಾಕರ್ ಅಲ್ಲವಾ? ಅಂತ ಮೊದಲ ದಿನ ಕುತೂಹಲದಿಂದ ಕೇಳಿದ್ದ ಮಾತೆಷ್ಟೋ ಅಷ್ಟೇ… ಆಮೇಲೆ ಅವರ ಜೊತೆ ಹೆಚ್ಚು ಸಂಭಾಷಿಸಲಾಗಲಿಲ್ಲ. ಎದುರಾದಾಗ ಪರಿಚಯದ ಮುಗುಳ್‍ನಗು ಕಾಣಿಸುತ್ತಿತ್ತೇ ವಿನಃ, ಅವರು ಮಾತಿಗಿಂತ ಕೃತಿಯಲ್ಲೇ ಜಾಸ್ತಿ ನಂಬಿಕೆ ಇಟ್ಟವರು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಮೂರು ದಿನ ಅವರಿಗೇ ಗೊತ್ತಾಗದೆ ಅವರನ್ನು ಗಮನಿಸಿದ್ದೆ ನಲ್ಲ… ನಿಜಕ್ಕೂ ಕಿಮ್ಮನೆ ರತ್ನಾಕರ್ ಓರ್ವ ಅಪರೂಪದ ರಾಜಕಾರಣಿ ಅಂತ ಮನದಟ್ಟಾಯ್ತು, ರಾಸಲೀಲೆಗಳು, ಸಿಡಿ ತಂತ್ರಗಾರಿಕೆಗಳು, ಚಮಚಾಗಿರಿ, ಓಲೈಸುವಿಕೆ… ಇಂತಹ ಹೊಲಸಿನಿಂದಲೇ ತುಂಬಿಹೋಗಿರುವ ರಾಜಕೀಯದಲ್ಲಿ ಕಿಮ್ಮನೆ ರತ್ನಾಕರ್‍ರಂಥ ನೇರ ನಿಷ್ಠುರ, ಸರಳ, ಸಜ್ಜನ ರಾಜಕಾರಣಿ ಈಗಲೂ ಇದ್ದಾರೆ ಎಂಬುದೇ ಒಂದು ಪವಾಡದಂತೆ ನನಗೆ ಭಾಸವಾಗುತ್ತಿದೆ.

ಡಾಕ್ಟರ್ ಟ್ರೀಟ್ಮೆಂಟಿಗಿಂತ ಹೆಚ್ಚಾಗಿ, ಆಪರೇಷನ್ ಥಿಯೇಟರ್‍ಮುಂದೆಯೇ ಕೂತು ಹೆಂಡತಿಯ ಜಪ ಮಾಡುತ್ತಿದ್ದರು. ಮೂರು ದಿನವೂ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಂಡ ಕಿಮ್ಮನೆಯವರ ಪ್ರೀತಿಯೇ ಅವರ ಪತ್ನಿಯವರನ್ನು ಅಷ್ಟುಬೇಗ ಗುಣ ಮಾಡಿರಬೇಕು. ಇದು ನನ್ನ ಅಭಿಪ್ರಾಯ.

ಕಿಮ್ಮನೆ ರತ್ನಾಕರ್ ಅದೇಕೋ ಮನಸ್ಸಿಗೆ ತುಂಬಾ ಹಿಡಿಸಿದರು. ಹಾಗಾಗಿ ಇಷ್ಟು ಬರೆದೆ. ಅವರು ಹೀಗೇ ನಿಷ್ಕಲ್ಮಷರಾಗಿ ಉಳಿದುಕೊಳ್ಳಲಿ. ಮತ್ತೆ ಚುನಾವಣೆ ಗೆದ್ದು ರಾಜಕಾರಣದಲ್ಲಿ ಸಕ್ರಿಯರಾಗಲಿ ಅನ್ನೋದು ಅಭಿಲಾಷೆ.
-ವೈದ್ಯ ವಿನಯ್‍ರಾವ್
(ಎಫ್‍ಬಿ ವಾಲ್‍ನಿಂದ)

Facebook Comments

Sri Raghav

Admin