ಕಿಸಾನ್ ಸೂರ್ಯೋದಯ ಸೇರಿ 3 ಮಹತ್ವದ ಯೋಜನೆಗಳಿಗೆ ಪ್ರಧಾನಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಅಹಮದಾಬಾದ್, ಅ.24- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‍ನಲ್ಲಿಂದು ಕೃಷಿ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಬಹುಕೋಟಿ ರೂ. ವೆಚ್ಚದ ಮೂರು ಮಹತ್ವದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. 3500 ಕೋಟಿ ರೂ. ವೆಚ್ಚದಲ್ಲಿ ಗುಜರಾತ್‍ನ ರೈತರಿಗೆ ಹಗಲು-ರಾತ್ರಿ ವಿದ್ಯುತ್ ಪೂರೈಸುವ ಕಿಸಾನ್ ಸೂರ್ಯೋದಯ ಯೋಜನೆಯನ್ನು ಮೋದಿ ಉದ್ಘಾಟಿಸಿದರು.

ಅಹಮದಾಬಾದ್‍ನ ಯು.ಎನ್.ಮೆಹ್ತಾ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಕ್ಕಳ ಹೃದ್ರೋಗ ಚಿಕಿತ್ಸೆಗಾಗಿ ವಿಶೇಷ ಘಟಕವನ್ನು ಸಹ ಪ್ರಧಾನಿ ಉದ್ಘಾಟಿಸಿ ಟೆಲಿ ಕಾರ್ಡಿಯೋಲಾಜಿ ಆ್ಯಪ್‍ಗೆ ಚಾಲನೆ ನೀಡಿದ್ದಾರೆ. ಕೃಷಿ ಮತ್ತು ಆರೋಗ್ಯ ಕ್ಷೇತ್ರದಂತೆಯೇ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಿರುವ ಮೋದಿ ಜುನಾಗಢ್ ಜಿಲ್ಲೆಯ ಪ್ರಸಿದ್ಧ ಮೌಂಟ್ ಗಿರ್‍ನರ್‍ಲ್ಲಿ 2.3ಕಿ.ಮೀ. ಉದ್ದದ ರೋಪ್‍ವೇಗೆ ಚಾಲನೆ ನೀಡಿದರು.

ಇದರಿಂದಾಗಿ ನಿರ್ದಿಷ್ಟ ಸ್ಥಳವನ್ನು ಕೇಬಲ್ ಕಾರ್ ಮೂಲಕ ಕೇವಲ ಏಳೂವರೆ ನಿಮಿಷಗಳಲ್ಲಿ ತಲುಪಲು ಸಾಧ್ಯ. ದೆಹಲಿಯಿಂದ ವಿಡಿಯೋ ಲಿಂಕ್ ಮೂಲಕ ಈ ಯೋಜನೆಗಳಿಗೆ ಚಾಲನೆ ನೀಡಿದ ಮಾತನಾಡಿದ ಅವರು, ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿಗೂ ಮುನ್ನ ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು ಈ ಯೋಜನೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದವು. ಆದರೆ, ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾಣಿ ನೇತೃತ್ವದ ಸರ್ಕಾರ ಕೇಂದ್ರದ ನೆರವಿನೊಂದಿಗೆ ಈ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಪ್ರಶಂಸಿಸಿದರು.

Facebook Comments