ಫೈನಲ್‍ಗೇರಲು ಪಂತ್ ಪಡೆ ಹೋರಾಟ, ಅಚ್ಚರಿ ಫಲಿತಾಂಶ ನೀಡುತ್ತಾ ಕೆಕೆಆರ್..?

ಈ ಸುದ್ದಿಯನ್ನು ಶೇರ್ ಮಾಡಿ

ಶಾರ್ಜಾ, ಅ. 13- ಐಪಿಎಲ್ 14ರ ಫೈನಲ್‍ಗೆ ಪ್ರವೇಶಿಸಲು ಇಂದು ಯುವ ನಾಯಕ ರಿಷಭ್‍ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಅನುಭವಿ ನಾಯಕ ಇಯಾನ್ ಮಾರ್ಗನ್ ಸಾರಥ್ಯದ ಕೆಕೆಆರ್ ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ.

ಲೀಗ್ ಹಂತದಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ ರಿಷಭ್ ಪಡೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಯ ಆಕ್ರಮಣಕಾರಿ ಆಟದಿಂದಾಗಿ ಸೋಲು ಕಂಡಿದ್ದರೂ ಕೂಡ ಕ್ವಾಲಿಫೈಯರ್ 2ರಲ್ಲಿ ತಮ್ಮ ಹಿಂದಿನ ಪಂದ್ಯದ ಸೋಲಿನ ಕಹಿಯನ್ನು ಮರೆತು ಗೆಲುವು ಸಾಸುವ ಮೂಲಕ ಫೈನಲ್‍ಗೇರಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ.

ಭಾರತದ ನೆಲದಲ್ಲಿ ನಡೆದ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಿ ಪ್ಲೇಆಫ್ ಹಂತವೂ ತಲುಪುದಿಲ್ಲ ಎಂದು ಲೆಕ್ಕಾಚಾರ ಹಾಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಯುಎಇ ಪಿಚ್‍ನಲ್ಲಿ ಆಡಿದ 8 ಪಂದ್ಯಗಳ ಪೈಕಿ 6ರಲ್ಲಿ ಗೆಲುವು ಸಾಸುವ ಮೂಲಕ ಎಲಿಮೇಟರ್‍ಗೆ ಅರ್ಹತೆ ಪಡೆದು, ಅಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಅಚ್ಚರಿ ಮೂಡಿಸಿರುವ ಮಾರ್ಗನ್ ಪಡೆಯು ಕ್ವಾಲಿಫೈಯರ 2 ಪಂದ್ಯದಲ್ಲೂ ಗೆಲುವು ಸಾಸುವ ಮೂಲಕ ಫೈನಲ್‍ಗೇರುವ ಲೆಕ್ಕಾಚಾರದಲ್ಲಿ ಮುಳುಗಿದೆ.

ಬೆರಗು ಮೂಡಿಸಿರುವ ಕೆಕೆಆರ್: 2012 ಹಾಗೂ 2014ರ ಐಪಿಎಲ್‍ನಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್ ನಂತರದ ಋತುವಿನಲ್ಲಿ ಹೇಳಿಕೊಳ್ಳದ ಪ್ರದರ್ಶನ ನೀಡುವಲ್ಲಿ ಎಡವಿತ್ತು, ಐಪಿಎಲ್ 14ರ ಪ್ರಥಮ ಚರಣದಲ್ಲೂ 7 ಸ್ಥಾನದಲ್ಲಿ ಕೆಕೆಆರ್ ಇಂದು ಕ್ವಾಲಿಫೈಯರ್ 2 ಹಂತಕ್ಕೆ ತಲುಪಿರುವುದು ಕೂಡ ಅಚ್ಚರಿ ಬೆಳವಣಿಗೆ.

ಈ ತಂಡದಲ್ಲಿರುವ ಶುಭಮನ್‍ಗಿಲ್, ವೆಂಕಟೇಶ್ ಅಯ್ಯರ್, ನಿತಿಶ್ ರಾಣಾ, ಶಿವಂಮಾವಿಯಂತಹ ಯುವ ಆಟಗಾರರು ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲ ತುಂಬಿದ್ದರೆ, ಹಿರಿಯ ಆಟಗಾರರಾದ ಇಯಾನ್ ಮಾರ್ಗನ್, ಸುನೀಲ್ ನರೇನ್, ದಿನೇಶ್ ಕಾರ್ತಿಕ್ ಅವರು ಕೂಡ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಎಲಿಮಿನೇಟರ್ ಪಂದ್ಯದಲ್ಲಿ ಸುನೀಲ್ ನರೇನ್ ಬೌಲಿಂಗ್ ಹಾಗೂ ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ, ಈ ತಂಡದ ಪ್ರಮುಖ ಅಸ್ತ್ರವೆನಿಸಿದ್ದ ಆ್ಯಂಡ್ರೂ ರಸೆಲ್ ಅವರ ಅನುಪಸ್ಥಿತಿಯು ಕೆಕೆಆರ್ ತಂಡವನ್ನು ಕಾಡುತ್ತಿದ್ದರೂ ಸಕೀಬ್ ಅಲ್ ಹಸನ್ ಅವರು ಆ ಕೊರತೆಯನ್ನು ನೀಗುವ ಜವಾಬ್ದಾರಿಯನ್ನು ಹೊರಬೇಕಾಗಿದೆ.

ಫೈನಲ್‍ಗೇರಲು ಪಂತ್ ಪಡೆ ಕಾತರ:ಐಪಿಎಲ್ 12ರ ಆವೃತ್ತಿಯ ಫೈನಲ್‍ನಲ್ಲಿ ಸೋಲು ಕಂಡು ಚಾಂಪಿಯನ್ ಪಟ್ಟದಿಂದ ವಂಚಿತರಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪಡೆಯು ಈ ಬಾರಿ ಫೈನಲ್‍ಗೇರುವ ಹೆಬ್ಬಯಕೆಯನ್ನು ಹೊಂದಿದೆ. ಶ್ರೇಯಾಸ್ ಅಯ್ಯರ್‍ನಿಂದ ನಾಯಕತ್ವವನ್ನು ವಹಿಸಿಕೊಂಡಿರುವ ರಿಷಭ್ ಪಂತ್ ಅವರು ತಂಡಕ್ಕೆ ಉತ್ತಮ ಕಾಣಿಕೆಯನ್ನು ನೀಡುವುದರ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆ ಹಲವು ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ತಂಡವು ಬ್ಯಾಟಿಂಗ್‍ನಲ್ಲಿ ಶಿಖರ್ ಧವನ್, ಪೃಥ್ವಿಶಾ, ರಿಷಭ್‍ಪಂತ್, ಹಿಟ್ಮಾಯರ್‍ರನ್ನು ನೆಚ್ಚಿಕೊಂಡಿದ್ದರೆ, ಶ್ರೇಯಾಸ್ ಅಯ್ಯರ್‍ರ ಬ್ಯಾಟಿಂಗ್ ವೈಫಲ್ಯ ತಂಡವನ್ನು ಕಾಡುತ್ತಿದೆ, ಇಂದಿನ ಪಂದ್ಯದಲ್ಲಿ ಅವರು ಲಯಕ್ಕೆ ಮರಳಿದರೆ ಬೃಹತ್ ಮೊತ್ತವನ್ನು ಕಲೆ ಹಾಕಬಹುದು.
ಇನ್ನು ಬೌಲಿಂಗ್‍ನಲ್ಲಿ ಅಕ್ಷರ್‍ಪಟೇಲ್, ನೋರ್ಟಿಜ್, ರಬಾಡ, ಅಕ್ಷರ್‍ಪಟೇಲ್, ಆವೇಶ್‍ಖಾನ್ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಅನುಭವಿ ಬೌಲರ್ ರವಿಚಂದ್ರನ್ ಅಶ್ವಿನ್‍ರ ಕಳಪೆ ಫಾರ್ಮ್ ತಂಡಕ್ಕೆ ಮಾರಕವಾಗಿದೆ.

Facebook Comments