ಅಪ್ರತಿಮ ವೀರಾಗ್ರಣಿ, ದೇಶದ ಪ್ರಥಮ ಮಹಾ ದಂಡನಾಯಕ ಕೆ.ಎಂ.ಕಾರ್ಯಪ್ಪ 121ನೇ ಜನ್ಮದಿನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಬೆಂಗಳೂರು, ಜ.28- ಭಾರತೀಯ ಸೇನಾಪಡೆಯ ಅಪ್ರತಿಮ ವೀರಾಗ್ರಣಿ ಮತ್ತು ದೇಶದ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 121ನೆ ಜನ್ಮದಿನ ಇಂದು.  ರಾಜಧಾನಿ ದೆಹಲಿ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಇಂದು ಕಾರ್ಯಪ್ಪ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ.

ಕೊಡಗಿನ ಮಡಿಕೇರಿಯಲ್ಲಿ 28ನೆ ಜನವರಿ 1899ರಲ್ಲಿ ಜನಿಸಿದ ಕೊಡಂಡೇರಾ ಕಿಪ್ಪರ್ ಮಾದಪ್ಪ ಕಾರ್ಯಪ್ಪ ಅವರು ಪ್ರೌಢರಾಗುತ್ತಿದ್ದಂತೆ ಬ್ರಿಟಿಷ್ ಇಂಡಿಯನ್ ಆರ್ಮಿ ಸೇರಿದರು. ಆಗ ಮೊದಲ ಮಹಾ ಸಂಗ್ರಾಮ ಮುಕ್ತಾಯ ಹಂತದಲ್ಲಿತ್ತು. ಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಶೌರ್ಯ-ಸಾಹಸಗಳಿಂದ ಯಶಸ್ವಿಯಾಗಿ ನಿರ್ವಹಿಸಿದ ಕಾರ್ಯಪ್ಪ ಎರಡನೆ ಮಹಾಯುದ್ಧದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು.

ಹಂತಹಂತವಾಗಿ ಅತ್ಯುನ್ನತ ಸೇನಾ ಹುದ್ದೆಗಳನ್ನು ಅಲಂಕರಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, 1947ರ ಇಂಡೋ-ಪಾಕ್ ಯುದ್ಧದಲ್ಲಿ ಭಾರತೀಯ ಸೇನೆಯನ್ನು ಸಮರ್ಥವನ್ನಾಗಿ ಮುನ್ನಡೆಸಿ ವೈರಿಗಳನ್ನು ಸದೆಬಡಿಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.  ಭಾರತೀಯ ಸೇನಾ ಪಡೆಯ ಫೀಲ್ಡ್ ಮಾರ್ಷಲ್ ಹುದ್ದೆಯಲ್ಲಿ ವೈವ್ ಸ್ಟಾರ್ ರ್ಯಾಂಕ್ ಪಡೆದ ಇಬ್ಬರೇ ಇಬ್ಬರು ಮಹಾ ದಂಡನಾಯಕರಲ್ಲಿ ಕಾರ್ಯಪ್ಪ ಸಹ ಒಬ್ಬರಾಗಿದ್ದು, ಈ ಗೌರವಕ್ಕೆ ಪಾತ್ರರಾದ ಮತ್ತೊಬ್ಬ ವೀರ ಸೇನಾನಿ ಎಂದರೆ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್‍ಷಾ.

ಭಾರತೀಯ ಸೇನೆಯಲ್ಲಿ ಆಧುನಿಕರಣಗೊಳಿಸಿ ಯೋಧರಿಗೆ ಅನೇಕ ಸೌಲಭ-ಸವಲತ್ತುಗಳನ್ನು ದೊರಕಿಸಿಕೊಟ್ಟ ಹೆಗ್ಗಳಿಕೆಗೆ ಕಾರ್ಯಪ್ಪನವರಿಗೆ ಸಲ್ಲುತ್ತದೆ.  ಭಾರತೀಯ ಸೇನಾಪಡೆಯ ಮಹಾ ವೀರಾಗ್ರಣಿ ಎಂದೇ ಗುರುತಿಸಿಕೊಂಡು ವಿದೇಶಗಳಲ್ಲೂ ಪ್ರಖ್ಯಾತರಾಗಿದ್ದ ಕೆ.ಎಂ.ಕಾರ್ಯಪ್ಪ 15ನೆ ಮೇ 1993ರಲ್ಲಿ ನಿಧನರಾದರು.

ಪ್ರಧಾನಿ ನಮನ: ದೇಶದ ಸೇನಾ ಪಡೆಯ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 121ನೆ ಜನ್ಮ ದಿನದ ಪ್ರಯುಕ್ತ ವೀರಾಗ್ರಣಿಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ಮೂರು ಸೇನಾಪಡೆಗಳ ಮಹಾ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಭಾರತೀಯ ಭೂ ಸೇನಾ ಪಡೆಯ ಮುಖ್ಯಸ್ಥ ಮುಕುಂದ್ ಮನೋಜ್ ನರವಣೆ ಸೇರಿದಂತೆ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿ ಕಾರ್ಯಪ್ಪ ಅವರ ಶೌರ್ಯ-ಸಾಹಸಗಳ ಗುಣಗಾನ ಮಾಡಿದ್ದಾರೆ.

Facebook Comments