ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪ್ರತಿಷ್ಠಿತ ಕೆಎಂಎಸ್ ಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ಬದುಕಿನಲ್ಲಿ ಸಾಧಿಸಬೇಕೆಂಬ ಛಲದಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಿ ಅವರಿಗೆ ಆಸರೆ ನೀಡುವ ಸಂಕಲ್ಪ ತೊಟ್ಟು ಉದ್ಯಮವೊಂದನ್ನು ಸ್ಥಾಪಿಸಿ ದೇಶ ಸೇರಿದಂತೆ ವಿದೇಶದಲ್ಲೂ ಹೆಸರು ಪಡೆದಿದ್ದ ಸಂಸ್ಥೆಗೆ ಈಗ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಮೂರೂವರೆ ಸಾವಿರಕ್ಕೂ ಹೆಚ್ಚು ನೌಕರರನ್ನು ಹೊಂದಿ ದೇಶದ ಪ್ರಮುಖ ಬಸ್‍ಗಳ ಕವಚ ನಿರ್ಮಾಣ ಮಾಡುತ್ತಿದ್ದ ಕೆಎಂಎಸ್ ಸಂಸ್ಥೆ ಈಗ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದೆ.

ಸ್ಥಳೀಯರಿಗೆ ಉದ್ಯೋಗ ನೀಡುವುದರ ಜತೆಗೆ ಸಾವಿರಾರು ಮಂದಿಗೆ ಜೀವನೋಪಾಯಕ್ಕೆ ಪರೋಕ್ಷವಾಗಿ ಸಹಕಾರಿಯಾಗಿದ್ದ ಸಂಸ್ಥೆ ಈಗ ಈ ಪರಿಸ್ಥಿತಿ ತಲುಪಲು ಸರ್ಕಾರದ ನಿಯಮಗಳು ಹಾಗೂ ವ್ಯವಸ್ಥೆಯಲ್ಲಿನ ಲೋಪಗಳು ಕಾರಣ ಎನ್ನಲಾಗುತ್ತಿದೆ. ಬದುಕಿನಲ್ಲಿ ಜಯಿಸಲೇಬೇಕೆಂಬ ಹಂಬಲ, ಗುರಿ ತಲುಪುತ್ತೇನೆ ಎನ್ನುವ ಹುಮ್ಮಸ್ಸು, ದೇಹದಲ್ಲಿ ಆತ್ಮಸ್ಥೈರ್ಯ ತುಂಬಿಕೊಂಡು ವರ್ಷಾನುಗಟ್ಟಲೆ ಪಟ್ಟ ಪರಿಶ್ರಮಕ್ಕೆ ಜಯ ಸಾಧಿಸಿದ್ದೆ.

ಆದರೆ ಈಗ ಸೋಲುವ ಹಂತ ತಲುಪಿದ್ದೇನೆ ಎಂದು ಕೆಎಂಎಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಇಸ್ಮಾಯಿಲ್ ಷರೀಫ್ ಹೇಳಿದ್ದಾರೆ. ಬಾಲ್ಯದಿಂದಲೂ ರಸ್ತೆಯ ಮೇಲೆ ಓಡಾಡುತ್ತಿದ್ದ ವಾಹನಗಳ ಮೇಲೆ ಒಂದು ರೀತಿಯ ಆಕರ್ಷಣೆಯನ್ನು ಬೆಳೆಸಿಕೊಂಡಿದ್ದ ಅವರು ವಿದ್ಯಾಭ್ಯಾಸ ಮುಂದುವರಿಸಲಾಗದ ಕಾರಣ ವಾಹನಗಳ ಕವಚ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಲು ತೊಡಗಿಸಿಕೊಂಡರು. ಕೆಲಸ ಮಾಡುತ್ತಲೇ ಹಲವಾರು ಕೌಶಲ್ಯದ ಹಂತಗಳನ್ನು ಬಹುಬೇಗನೆ ಕಲಿತುಕೊಂಡ ಅವರು ನಿರ್ಮಾಣ ಸಂಸ್ಥೆಯ ಮಾಲೀಕರಿಂದಲೂ ಸೈ ಎನಿಸಿಕೊಂಡಿದ್ದರು.

ಏಕೋ ಏನೋ ಸ್ವತಂತ್ರವಾಗಿ ದುಡಿಯುವ ಹಂಬಲ ಮನಸ್ಸಿನಲ್ಲಿ ಮೂಡಿದ್ದರಿಂದ ಕೆಎಂಎಸ್ ಸಂಸ್ಥೆಯನ್ನು ಹುಟ್ಟುಹಾಕಿ ಕೆಲವೇ ಕೆಲವು ನುರಿತ ಕೆಲಸಗಾರರ ಗುಂಪನ್ನು ಕಟ್ಟಿಕೊಂಡು ಕವಚ ನಿರ್ಮಾಣ ಸಂಸ್ಥೆಯಲ್ಲಿ ಗುತ್ತಿಗೆದಾರರಾಗಿ ಕೆಲಸ ಪ್ರಾರಂಭಿಸಿದರು. ದಿನಕಳೆದಂತೆ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ನಿರ್ಧಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಂತಹ ಪ್ರಮುಖ ಸಾರಿಗೆ ಸಂಸ್ಥೆಗಳನ್ನು ಸಂಪರ್ಕಿಸಿ ತಮ್ಮ ಪ್ರಸ್ತಾವನೆಯನ್ನು ಒದಗಿಸಿದರು.

ಅದೇ ಸಮಯಕ್ಕೆ ಸರಿಯಾಗಿ ಸಾರಿಗೆ ಸಂಸ್ಥೆಗಳೂ ಸಹ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತಂದು ಸಂಸ್ಥೆಯನ್ನು ಅಭಿವೃದ್ಧಿ ಪಡಿಸುವ ಚಿಂತನೆಯಲ್ಲಿ ತೊಡಗಿಸಿಕೊಂಡಿತ್ತು. ಆದರೆ ಸಾರಿಗೆ ಸಂಸ್ಥೆಯು ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕುವ ಚಿಂತನೆಯಲ್ಲಿರುವಾಗ ಕೆ.ಎಂ.ಎಸ್. ಸಂಸ್ಥೆಯನ್ನು ಗುತ್ತಿಗೆದಾರರನ್ನಾಗಿ ನೇಮಿಸಿಕೊಂಡರು.

2006ರಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತಮ್ಮದೇ ಆದ ಉತ್ಪಾದನಾ ಘಟಕವನ್ನು ಸ್ಥಾಪಿಸಿದ ಷರೀಫ್ ಅವರು ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಕೆಲಸವನ್ನು ನೀಡುವ ಮೂಲಕ ವಿಭಿನ್ನ ವಿನ್ಯಾಸದಿಂದ ಕೂಡಿದ ಹೊಸ ಹೊಸ ಮಾದರಿಯ ವಾಹನಗಳನ್ನು ಜನರಿಗೆ ಪರಿಚಯಿಸಿ ಜನಮನ ಸೂರೆಗೊಂಡು ಕೆಎಂಎಸ್ ಸಂಸ್ಥೆಗೆ ದೊಡ್ಡ ಹೆಸರನ್ನೇ ತಂದುಕೊಟ್ಟಿತು.

ಹುಬ್ಬಳ್ಳಿ, ಯಾದಗಿರಿ ಮುಂತಾದೆಡೆಗಳಲ್ಲೂ ವಾಹನ ಕವಚ ಮತ್ತು ರಿಪೇರಿ ಕೆಲಸಗಳ ಶಾಖೆ ಆರಂಭಿಸಿದ ಇವರು ಅತ್ಯಲ್ಪ ಅವಧಿಯಲ್ಲಿಯೇ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುತ್ತಾ ಸಾಗಿದರು. ಹೊಸ ಹೊಸ ವಿನ್ಯಾಸದೊಂದಿಗೆ ಇವರ ಸಂಸ್ಥೆಯಿಂದ ಹೊರಹೊಮ್ಮಿದ ವಾಹನಗಳಿಗೆ ಬೇಡಿಕೆ ಹೆಚ್ಚಾದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಇತರೆ ಸಂಸ್ಥೆಗಳೊಂದಿಗೆ ಟೆಂಡರ್ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಂತಾಯಿತು.

2007ರಲ್ಲಿ ಕೆಎಂಎಸ್ ಸಂಸ್ಥೆ ಒಂದು ಪ್ರೈ.ಲಿ. ಕಂಪೆನಿಯಾಗಿ ಹೊರಹೊಮ್ಮಿದ್ದಲ್ಲದೆ ಸಂಸ್ಥೆಗೆ ಗುಣಮಟ್ಟದ ಆಧಾರದ ಮೇಲೆ ಐಎಸ್‍ಒ 9001/2008 ಮಾನ್ಯತೆಯೂ ಲಭಿಸಿತು.
ಕರ್ನಾಟಕ ಸಾರಿಗೆ, ಬೆಂಗಳೂರು ಮಹಾನಗರ ಸಾರಿಗೆ, ವಾಯುವ್ಯ ಕರ್ನಾಟಕ ಸಾರಿಗೆ, ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆ, ತಮಿಳುನಾಡು ಸಾರಿಗೆ ಸಂಸ್ಥೆ, ಉತ್ತರ ಬೆಂಗಾಳ ಸಾರಿಗೆ ಸಂಸ್ಥೆ ಮುಂತಾದ ಸಾರಿಗೆ ಸಂಸ್ಥೆಗಳ ವಾಹನಗಳಿಗೆ ಕವಚ ನಿರ್ಮಾಣ ಮಾಡುತ್ತಿರುವುದಲ್ಲದೆ ಸಾರಿಗೆ ಉದ್ಯಮಿಗಳಾದ ಎಸ್‍ಆರ್‍ಎಸ್, ಮೇಘ ಟ್ರಾವೆಲ್ಸ್, ಸಿದ್ಧಗಂಗಾ ಟ್ರಾವೆಲ್ಸ್,

ಗ್ರೀನ್‍ಲೈನ್ ಟ್ರಾವೆಲ್ಸ್, ಟಿವಿಎಸ್‍ನಂತಹ ಖಾಸಗಿ ಸಂಸ್ಥೆಗಳ ವಾಹನಗಳಿಗೂ ಕವಚ ನಿರ್ಮಾಣ ಮಾಡಿಕೊಟ್ಟಿರುತ್ತಾರೆ. ಸಾರಿಗೆ ವಾಹನ ಕ್ಷೇತ್ರದಲ್ಲೆ ಹೆಸರುವಾಸಿಯಾಗಿರುವಂತಹ ಅಶೋಕ್ ಲೈಲ್ಯಾಂಡ್, ಟಾಟಾ ಮೋಟರ್ಸ್, ಐಚರ್ ಕಂಪೆನಿಗಳಂದ ದೊಡ್ಡ ದೊಡ್ಡ ಕಂಪೆನಿಗಳು ಕೆಎಂಎಸ್ ಸಂಸ್ಥೆಯನ್ನು ತನ್ನ ಅಧಿಕೃತ ಕವಚ ನಿರ್ಮಾಣದಾರರನ್ನಾಗಿ ನೇಮಕ ಮಾಡಿಕೊಂಡಿತು. ಆಧುನಿಕ ಯಂತ್ರೋಪಕರಣ ಗಳನ್ನು ಆಮದು ಮಾಡಿಕೊಂಡು ಗುಣಮಟ್ಟದ ಕವಚಗಳ ನಿರ್ಮಾಣಕ್ಕೆ ಮುಂದಾಗಿತ್ತು.

ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದ ಅವರು 2010ರಲ್ಲಿ ಐ-ಮ್ಯಾಕ್ ಇಂಡಿಯಾ ಪ್ರೈ.ಲಿ., ಹೆಸರಿನಲ್ಲಿ ನೂತನ ಘಟಕವನ್ನು ಸ್ಥಾಪಿಸಿ ಶವರ್ ಟೆಸ್ಟ್, ಪೈಂಟಿಂಗ್ ಬೂತ್, ಪೌಡರ್ ಕೋಟಿಂಗ್ ಯುನಿಟ್‍ನಂತಹ ನವೀನ ತಂತ್ರಜನದ ಮೂಲ ಸೌಕರ್ಯಗಳನ್ನು ಅಳವಡಿಸಿ ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಿದರು.

ಮುಂದುವರೆದಂತೆ ಪ್ರಯಾಣಿಕರ ಆಸನ ತಯಾರಿಕಾ ಘಟಕ ಮತ್ತು ಟ್ಯೂಬ್ ರೋಲಿಂಗ್ ಮಿಲ್ ಪ್ಲಾಂಟ್ ಸ್ಥಾಪಿಸಿ ಅದಕ್ಕೂ ಐಎಸ್‍ಒ 9001ರ ಮಾನ್ಯತೆ ಗಳಿಸಿತು. ಸಂಸ್ಥೆಯು ಹಲವಾರು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಪಾಲ್ಗೊಂಡು ತನ್ನ ಕೌಶಲ್ಯ ಮೆರೆದು ಎಲ್ಲಾ ಸಂಸ್ಥೆಗಳಿಂದ ಪ್ರಶಂಸೆಗೆ ಪಾತ್ರವಾಯಿತು.

ಆದರೆ, ಇತ್ತೀಚಿನ ದಿನಗಳಲ್ಲಿ ಅನ್ಯರಾಜ್ಯಗಳ ಲಾಬಿಗೆ ಕೆಲವು ಅಧಿಕಾರಿಗಳು ಮಣಿಯುತ್ತಿದ್ದಾರೆ. ಸ್ಥಳೀಯ ಕಾರ್ಖಾನೆಗಳಿಗೆ ಪ್ರೋತ್ಸಾಹ ನೀಡಿ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಉರಾದೆಯನ್ನೇ ಮರೆತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕೇವಲ ಸಂಸ್ಥೆಯನ್ನೇ ನಂಬಿಕೊಂಡು ಜೀವನ ಕಟ್ಟಿಕೊಂಡಿರುವ ಎಷ್ಟೋ ಕುಟುಂಬಗಳ ಗತಿ ಏನಾಗಬಹುದು ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ. ವರ್ಷಾನುಗಟ್ಟಲೆಯಿಂದ ಹಗಲಿರುಳೆನ್ನದೆ ಶ್ರಮವಹಿಸಿ, ಬೆಳೆಸಿ, ಕಟ್ಟಿದ ಸಂಸ್ಥೆಗೆ ಕೇವಲ ಆರ್ಥಿಕ ಮುಗ್ಗಟ್ಟು ಎನ್ನುವ ಭೂತ ನೆಲಸಮ ಮಾಡುವುದೋ, ಏನೋ ಎಂಬ ಆತಂಕ ಇಸ್ಮಾಯಿಲ್ ಅವರನ್ನು ಕಾಡುತ್ತಿದೆ.

Facebook Comments