ಇಡಿಯಿಂದ ಕೆ.ಎನ್.ರಾಜಣ್ಣ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.9- ಹರ್ಷ ಶುಗರ್ಸ್ ಕಾರ್ಖಾನೆಗೆ ಸಾಲ ನೀಡಿದ ವಿಚಾರದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಇಂದು ವಿಚಾರಣೆಗೆ ಒಳಪಡಿಸಿದರು. ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯಲ್ಲಿ ಇಂದು ರಾಜಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್ ಕಾರ್ಖಾನೆಗೆ ಅಪೆಕ್ಸ್ ಬ್ಯಾಂಕ್‍ನಡಿ ಬರುವ ಕೆಲವು ಬ್ಯಾಂಕ್‍ಗಳಿಂದ ಸಾಲ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ರಾಜಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್‍ನಲ್ಲೇ ನೋಟಿಸ್ ನೀಡಿದ್ದ ಇಡಿ ಅಧಿಕಾರಿಗಳು ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಯಾವ ವಿಷಯದ ವಿಚಾರಣೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ, ಹರ್ಷ ಶುಗರ್ಸ್ ಕಾರ್ಖಾನೆ ಸಂಬಂಧ ಸ್ಪಷ್ಟೀಕರಣಕ್ಕೆ ತಮ್ಮನ್ನು ಕರೆದಿರಬಹುದು ಎಂಬುದು ತಮ್ಮ ಊಹೆ. ಹಲವಾರು ಬ್ಯಾಂಕ್‍ಗಳು ಆ ಕಾರ್ಖಾನೆಗೆ ಸಾಲ ನೀಡಿವೆ. ಕಳೆದ ಮಾರ್ಚ್‍ನಲ್ಲಿ ಸ್ಟ್ಯಾಂಡರ್ಡ್ ಅಕೌಂಟ್ ಮೂಲಕವೂ ವ್ಯವಹಾರ ನಡೆದಿವೆ.

ಈಗಾಗಲೇ 39 ಕೋಟಿ ರೂ.ನಷ್ಟು ಹಣ ವಾಪಸ್ ಕೂಡ ಆಗಿದೆ. ಅಧಿಕಾರಿಗಳು ಏನು ಕೇಳುತ್ತಾರೋ ಅದಕ್ಕೆ ಸಂಬಂಧಿಸಿದಂತೆ ತಮಗೆ ಗೊತ್ತಿರುವ ಮಾಹಿತಿ ನೀಡುವುದಾಗಿ ಹೇಳಿದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ತಮ್ಮದು ಪ್ರತ್ಯೇಕ ವ್ಯವಹಾರಗಳಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments