“ನನ್ನ ವಿರುದ್ಧ ದಿಕ್ಕಾರ ಕೂಗಿದರೆ ನಾಲಿಗೆ ಸೀಳ್ತಿನಿ, ಕಾಂಗ್ರೆಸ್ ಹಳ್ಳಹಿಡಿಯಲು ‘ಝೀರೋ ಟ್ರಾಫಿಕ್’ ಕಾರಣ”

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 27- ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ಝೀರೋ ಟ್ರಾಫಿಕ್ ಕಾರಣ ಎಂದು ಹೇಳುವ ಮೂಲಕ ಮಾಜಿ ಶಾಸಕ ಹಾಗೂ ಅಪೆಕ್ಸ್ ಬ್ಯಾಂಕ್ ರಾಜ್ಯಾಧ್ಯಕ್ಷ ಕೆ.ಎನ್.ರಾಜಣ್ಣ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ನಿನ್ನೆ ಪಕ್ಷದ ಕಚೇರಿಯಲ್ಲಿ ಯಾರೋ ಧಿಕ್ಕಾರ ಕೂಗಿದರಂತೆ ಆ ಮಹಾನುಭಾವರು ಯಾರು ಎಂದು ನೋಡಲು ಇಂದು ನಾನು ಪಕ್ಷದ ಕಚೇರಿಗೆ ಬಂದಿದ್ದೆ. ಆದರೆ ಅವರ ದರ್ಶನವಾಗಲಿಲ್ಲ.

ತಾಕತ್ತಿದ್ದರೆ ನನ್ನ ಎದುರಿಗೆ ನಿಂತು ಧಿಕ್ಕಾರ ಕೂಗಲಿ. ಅವರ ನಾಲಿಗೆಯನ್ನು ನಾನೇ ಸೀಳುತ್ತೇನೆ. ಅವರು ದೊಡ್ಡವರಿರಲಿ, ಚಿಕ್ಕವರಿರಲಿ. ಫೇಸ್‍ಬುಕ್ ಅಥವಾ ಬೇರೆ ಕಡೆ ಮಾತನಾಡಿದ್ದರೆ ನಾನು ಮಾತನಾಡಲ್ಲ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ಝೀರೋ ಟ್ರಾಫಿಕ್ ಕಾರಣ. ಅವರು ಒಂದು ಬಾರಿ ಬಂದು ಹೋದರೆ 500 ವೋಟುಗಳು ಕಡಿಮೆಯಾಗುತ್ತವೆ. ಝೀರೋ ಟ್ರಾಫಿಕ್‍ನಿಂದ ಜನ ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದನ್ನು ಅವರಿಗೆ ಯಾರೂ ಹೇಳುತ್ತಿಲ್ಲ.

ಅಧಿಕಾರ ಎಂಬುದು ವಿಷ ಇದ್ದಂತೆ. ನೇರವಾಗಿ ತಿಂದರೆ ಸಾಯುತ್ತಾರೆ. ಔಷಧಿ ಮಾಡಿದರೆ ಕ್ಯಾನ್ಸರ್ ಕೂಡ ಗುಣಪಡಿಸಬಹುದು ಎಂದು ಪರಮೇಶ್ವರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕೊರಟಗೆರೆಯಲ್ಲಿ ಪರಮೇಶ್ವರ್ ಗೆದಿದ್ದೇ ನನ್ನಿಂದ. ಇದನ್ನು ಎದೆತಟ್ಟಿಕೊಂಡು ಹೇಳುತ್ತೇನೆ. ಶತ್ರುವಾಗಿದ್ದರೂ ಸರಿ ಕಷ್ಟದಲ್ಲಿದ್ದಾಗ ನೆರವಾಗುವುದು ನನ್ನ ಸ್ವಭಾವ. ಪರಮೇಶ್ವರ್ ಮನೆಯಲ್ಲಿ ಮಗ ಆ ರೀತಿ ಆದ. ಅಣ್ಣನ ಆರೋಗ್ಯ ಸಮಸ್ಯೆ.

ಎಲ್ಲದರಿಂದ ಆತ ವೈಯಕ್ತಿಕ ಜೀವನದಲ್ಲಿ ಸೊರಗಿದ್ದ. ನನ್ನ ಜತೆಯಲ್ಲಿ ಓದಿದ ಸ್ನೇಹಿತ. ಹಾಗಾಗಿ ನನ್ನನ್ನು ಬಂದು ಕೇಳದೇ ಇದ್ದರೂ ನಾನೇ ಸ್ವಯಂ ಪ್ರೇರಿತನಾಗಿ ಕೊರಟಗೆರೆಯಲ್ಲಿ ಗೆಲ್ಲಿಸಿದೆ. ಆದರೆ, ಉಪಕಾರದ ಸ್ಮರಣೆ ಆತನಿಗೆ ಗೊತ್ತಿಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಆತನಿಗೆ ಅಧಿಕಾರ ಸಿಕ್ಕರೆ ನಾನು ಸಂತಸ ಪಡುತ್ತೇನೆ. ಹೊಟ್ಟೆಕಿಚ್ಚು ಪಡುವುದಿಲ್ಲ. ಇಂತಹ ಗುಣದಿಂದಲೇ ನಾನು ಯಶಸ್ಸು ಸಾಧಿಸಿದ್ದೇನೆ. ಉಪಕಾರ ಸ್ಮರಣೆ ಇಲ್ಲದವರಿಗೆ ದೇವರು ಶಿಕ್ಷಿಸುತ್ತಾನೆ ಎಂಬುದಕ್ಕೆ ಲೋಕಸಭೆ ಚುನಾವಣೆಯೇ ಸಾಕ್ಷಿ ಎಂದರು.

ಮೂರು ವರ್ಷಗಳ ಹಿಂದೆ ಮೂಗರ್ಜಿಯನ್ನು ಇಟ್ಟುಕೊಂಡು ನನ್ನ ವಿರುದ್ಧ ಅಧಿಕಾರಿಗಳನ್ನು ಕಳುಹಿಸಿ ಅಪೆಕ್ಸ್ ಬ್ಯಾಂಕ್‍ನಲ್ಲಿ ತನಿಖೆ ಮಾಡಿಸುತ್ತಿದ್ದಾರೆ. ಯಾವನು ಬೇಕಾದ್ರೂ ಬರಲಿ, ನಾನು ಐದು ವರ್ಷ ಅಧಿಕಾರ ಮುಗಿಸಿಯೇ ತೀರುತ್ತೇನೆ.

ರೇವಣ್ಣ ಅಲ್ಲ ಅವರ ತಾತ ಬಂದರೂ ಹೆದರಲ್ಲ. ಕೆಎಂಎಫ್‍ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿರುವ ದಾಖಲೆ ನನ್ನ ಬಳಿ ಇದೆ. ನಿಂಬೆಹಣ್ಣು ತೋರಿಸಿ ಹೆದರಿಸಿಕೊಂಡು ಬಂದಂತೆ ಇಲ್ಲಿ ಆಗಲ್ಲ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಅಧಿಕಾರ ಇರಲಿ, ಬಿಡಲಿ ನನಗೆ ಜನ ಬೇಕು ಎಂದು ಹೇಳಿದರು.

ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರಕ್ಕೆ ಮುಂದಿನ ಬಾರಿಗೆ ಮಾಜಿ ಸಂಸಂದ ಎಸ್.ಪಿ.ಮುದ್ದಹನುಮೇಗೌಡರನ್ನು ಕಣಕ್ಕಿಳಿಸುತ್ತೇವೆ. ಹಾಲಿ ಶಾಸಕ ಗೌರಿಶಂಕರ್ ಮಧುಗಿರಿಗೆ ಬಂದು ಸ್ಪರ್ಧಿಸುವುದಾದರೆ ನಾನು ಸ್ವಾಗತಿಸುತ್ತೇನೆ.

ಬೇಕಿದ್ದರೆ ನಾನೇ ಅವನ ಬಾಗಿಲಿಗೆ ಹೋಗಿ ಕಾಲಿಗೆ ಬಿದ್ದು ಬರುವಂತೆ ಕೇಳುತ್ತೇನೆ ಎಂದ ರಾಜಣ್ಣ, ಅವನೊಬ್ಬ ಕಚಡ. ಈ ಹಿಂದೆ ಮಧುಗಿರಿ ಕ್ಷೇತ್ರದಲ್ಲಿ 540 ಮತಗಳ ನಂತರ ಗೆದ್ದು ಆಪರೇಷನ್ ಕಮಲದಿಂದ ಬಿಜೆಪಿಗೆ ಹೋಗಿದ್ದ ಮನುಷ್ಯ. ಅವನ ಬಗ್ಗೆ ಮಾತನಾಡಲೂ ನನಗೆ ಹೇಸಿಗೆಯಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸನ್ನು ನಾನು 1969ರಿಂದಲೂ ಕಟ್ಟಿದ್ದೇನೆ. ನನ್ನ ಜತೆ ಹಲವಾರು ಸ್ನೇಹಿತರಿದ್ದರು. ಅವರನ್ನೆಲ್ಲಾ ಒಗ್ಗೂಡಿಸಿ ಮತ್ತೆ ಪಕ್ಷ ಕಟ್ಟುತ್ತೇನೆ. ಈಗಾಗಲೇ ಸಫಿ ಅಹಮ್ಮದ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ.

ಮುಂದಿನ ಚುನಾವಣೆ ವೇಳೆಗೆ ಬಿಜೆಪಿಯಲ್ಲಿ ಸಂಸದರಾಗಿರುವ ಜಿ.ಎಸ್.ಬಸವರಾಜು ಅವರನ್ನು ಮತ್ತೆ ಕಾಂಗ್ರೆಸ್‍ಗೆ ಕರೆತರುತ್ತೇನೆ. ನಮ್ಮ ಕಣ್ಣುಮುಂದೆಯೇ ಪಕ್ಷ ನಾಶವಾಗುತ್ತಿದ್ದರೆ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯ ಅವರು ಇಲ್ಲದೇ ಇದ್ದರೆ ನನ್ನನ್ನೂ ಸೇರಿದಂತೆ ಕಾಂಗ್ರೆಸ್‍ನಿಂದ ಬಿ ಫಾರಂ ಕೇಳುವವರೇ ಇಲ್ಲದಂತಾಗುತ್ತದೆ. ಬಡವರಿಗೆ ಅಕ್ಕಿ ಕೊಡದೇ ಇದಿದ್ದರೆ ಬರಗಾಲದಲ್ಲಿ ಜನ ಮಣ್ಣು ತಿನ್ನುತ್ತಿದ್ರಾ ? ಸಿದ್ದರಾಮಯ್ಯ ಅವರ ಬಡವರ ಯೋಜನೆಗಳನ್ನು ಮಾಧ್ಯಮದವರೂ ಪ್ರಚಾರ ಮಾಡುವುದಿಲ್ಲ.

ಕಾಂಗ್ರೆಸ್‍ನವರೂ ಹೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ ರಾಜಣ್ಣ, ಇನ್ನೊಂದು ವಾರದಲ್ಲಿ ಝೀರೋ ಟ್ರಾಫಿಕ್ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಮಧುಗಿರಿ, ಶಿರಾ, ಪಾವಗಡ, ಕೊರಟಗೆರೆ ತಾಲ್ಲೂಕು ಸೇರಿ ಹೊಸ ಜಿಲ್ಲೆ ರಚನೆ ಮಾಡಬೇಕು, ರಾಯದುರ್ಗ ರೈಲ್ವೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು, ಮುಚ್ಚಿಹೋಗಿರುವ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಬೇಕೆಂದು ಸೇರಿದಂತೆ ಐದು ಬೇಡಿಕೆಗಳ ಈಡೇರಿಕೆಗೆ ನೂತನ ಸಂಸದರನ್ನು ಒತ್ತಾಯಿಸುವುದಾಗಿ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin