ದ್ವೇಶ ರಾಜಕಾರಣದಿಂದ ಬೇಸತ್ತು ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎನ್.ರಾಜಣ್ಣ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜು.21-ಡಿಸಿಸಿ ಬ್ಯಾಂಕ್‍ನ ಸೂಪರ್‍ಸೀಡ್ ಮಾಡಿರುವುದರ ಹಿಂದೆ ರಾಜಕೀಯ ದ್ವೇಷ ಅಡಗಿದ್ದು, ಝೀರೋ ಟ್ರಾಫಿಕ್ ಮಂತ್ರಿ ಕೂಡ ಅದಕ್ಕೆ ಬೆಂಬಲ ನೀಡಿದ್ದಾರೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಿಡಿಕಾರಿರುವುದಲ್ಲದೆ, ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನ ಮಾಡಿರುವುದಾಗಿ ಹೇಳಿದರು.

ಡಿಸಿಸಿ ಬ್ಯಾಂಕ್ ಸೂಪರ್‍ಸೀಡ್ ಮಾಡಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇದೇನು ಹೊಸ ವಿಚಾರ ಅಲ್ಲ. ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ. ನಾವೇನು ಬ್ಯಾಂಕ್‍ನಲ್ಲಿ ಲೂಟಿ ಮಾಡಿಲ್ಲ. ಜನರಿಗೆ ಒಳ್ಳೆಯದು ಮಾಡುವ ಉದ್ದೇಶದಿಂದ ಸಣ್ಣ ಲೋಪವಾಗಿರಬಹುದು. ಅದು ದೊಡ್ಡ ಲೋಪವೇನಲ್ಲ, ಸೂಪರ್‍ಸೀಡ್‍ಗೆ ಕಾರಣವಲ್ಲ ಎಂದು ಹೇಳಿದರು.

ದೇವೇಗೌಡರು ಮತ್ತು ನಮ್ಮ ಜಿಲ್ಲೆಯ ಝೀರೋ ಟ್ರಾಫಿಕ್ ಮಂತ್ರಿ ಇದಕ್ಕೆಲ್ಲ ನೇರ ಹೊಣೆ. ಇದು ಯಾರಿಗೂ ಗೌರವ ತರುವಂತಹ ವಿಚಾರವಲ್ಲ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‍ನಲ್ಲಿ ನಾನು ಅಧ್ಯಕ್ಷನಾಗುವ ವೇಳೆಗೆ 3 ಕೋಟಿ ಠೇವಣಿ ಇತ್ತು. ಈಗ ಅದು ಒಂದು ಸಾವಿರ ಕೋಟಿಗೆ ಹೆಚ್ಚಳವಾಗಿದೆ. ಪ್ರಾಮಾಣಿಕವಾಗಿ ಜನರಿಗೆ ಅನುಕೂಲ ಮಾಡಿಕೊಡುವ ನಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ದ್ವೇಷ ಸಾಧಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್‍ನ ಸೂಪರ್‍ಸೀಡ್ ಆದೇಶ ನಾಲ್ಕು ದಿನ ಮಾತ್ರ ಜೀವಂತವಾಗಿರುತ್ತದೆ. ಸರ್ಕಾರ ಪತನವಾಗುತ್ತದೆ. ಇನ್ನು ಹತ್ತು ದಿನಗಳೊಳಗಾಗಿ ಈ ಆದೇಶ ರದ್ದು ಗೊಳಿಸಿ ನಾವು ಮತ್ತೆ ಅಧಿಕಾರ ವಹಿಸಿಕೊಳ್ಳುತ್ತೇವೆ. ಸೂಪರ್‍ಸೀಡ್ ಆದೇಶ ವಿರೋಧಿಸಿ ಯಾರೂ ಪ್ರತಿಭಟನೆ ಮಾಡುವುದು ಬೇಡ, ಒಂದು ಗಂಟೆ ಹೆಚ್ಚು ಕೆಲಸ ಮಾಡಿ ನಿಮ್ಮ ಸಿಟ್ಟನ್ನು ಹೊರಹಾಕಿ ಎಂದು ಹೇಳಿದರು.

Facebook Comments

Sri Raghav

Admin