ಕೊಡಗಿನಲ್ಲಿ ತಗ್ಗಿದ ನೆರೆ, ಪರಿಹಾರ ಕಾರ್ಯ ಚುರುಕು
ಮಡಿಕೇರಿ, ಆ.8- ಕೊಡಗಿನಲ್ಲಿ ಮಳೆ ತಗ್ಗಿದ್ದು , ಪರಿಹಾರ ಕಾರ್ಯ ಚಟುವಟಿಕೆ ಚುರುಕುಗೊಂಡಿದೆ. ಭಾಗಮಂಡಲದಲ್ಲಿ ನೆರೆ ತಗ್ಗಿದ್ದು , ವಾಹನ ಸಂಚಾರ ಆರಂಭಗೊಂಡಿದೆ. ಈ ನಡುವೆ ತಲಕಾವೇರಿಯ ದೇಗುಲದಲ್ಲಿ ಇಂದಿನಿಂದ ಪೂಜೆಗಳು ಕೂಡ ಆರಂಭಗೊಂಡಿದೆ ಎಂದು ಹೇಳಲಾಗುತ್ತಿದೆ.
ಗುಡ್ಡ ಕುಸಿತ ದಿಂದಾಗಿ ಅರ್ಚಕರ ಕುಟುಂಬ ನಾಪತ್ತೆ ಯಾಗಿದ್ದು ,
ಅವರ ದೇಹಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಈ ನಡುವೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ.
ಊಟ ಹಾಗೂ ಔಷಯನ್ನು ನೀಡಲಾಗುತ್ತಿದ್ದು , ಎಲ್ಲರೂ ಮುಂದೇನು ಎಂಬ ಆತಂಕದಲ್ಲಿದ್ದಾರೆ.ಸಚಿವರಾದ ಆರ್.ಅಶೋಕ್ ಮತ್ತು ವಿ.ಸೋಮಣ್ಣ ಅವರು ಕೊಡಗಿನಲ್ಲೇ ಬೀಡು ಬಿಟ್ಟಿದ್ದು , ಪರಿಹಾರದ ಕಾರ್ಯ ಉಸ್ತುವಾರಿಯನ್ನು ಪರಿಶೀಲಿಸುತ್ತಿದ್ದಾರೆ.
ತುರ್ತು ಕಾರ್ಯಗಳಿಗೆ ಯಾವುದೇ ಅಡಚಣೆಯಾಗದಂತೆ ಹಣಕಾಸು ಬಿಡುಗಡೆಯನ್ನೂ ಕೂಡ ಮಾಡಲಾಗುತ್ತಿದೆ. ಎನ್ಡಿಆರ್ಎಫ್ ತಂಡ ಇಂದೂ ಕೂಡ ಬ್ರಹ್ಮಗಿರಿ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆಸಲಿದೆ.
ಅಪಾಯದ ಮುನ್ಸೂಚನೆ ಇದ್ದರೂ ಕೂಡ ಗುಡ್ಡ ಪ್ರದೇಶಗಳಲ್ಲಿ ನೆಲೆಸಿರುವ ಕೆಲವರು ಪರಿಹಾರ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಕೊಡಗಿನಾದ್ಯಂತ ಈಗ ಪ್ರವಾಹ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ಸಿಬ್ಬಂದಿಗಳು ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.