ಬೆಳಗಾವಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರು ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.10- ಕಳೆದ ನಾಲ್ಕು ದಿನಗಳಿಂದ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದ ಮುಷ್ಕರದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರೈತಸಂಘದ ನಾಯಕರಾಗಿರುವ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇಂದು ಬೆಳಗಾವಿಯಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಲು ತೆರಳಿದ್ದರು.

ಸಭೆಗೂ ಮುನ್ನ ನಗರದ ಚನ್ನಮ್ಮ ವೃತ್ತದ ಬಳಿ ಮಿಲನ್ ಹೊಟೇಲ್ ಕೊಠಡಿಯಲ್ಲಿ ಕುಳಿತಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿ ಕ್ಯಾಂಪ್ ಠಾಣೆ ಪೊಲೀಸರು ಹಠಾತ್ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಮಿಕ ಇಲಾಖೆ ಕೈಗಾರಿಕಾ ವಿವಾದ ಕಾಯ್ದೆ-1947 ಕಲಂ 10 (3)ರಡಿ ಸಾರಿಗೆ ಮುಷ್ಕರ ನಿಷೇಧಿಸಿ ನಿನ್ನೆ ಆದೇಶ ಹೊರಡಿಸಿದೆ. ಅದರ ಅನುಸಾರ ಮುಷ್ಕರದಲ್ಲಿ ಭಾಗವಹಿಸುವುದು ಮತ್ತು ಅದಕ್ಕೆ ಬೆಂಬಲ ನೀಡುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಮೂಲಕ ಕಳೆದ ನಾಲ್ಕು ದಿನಗಳಿಂದ ಸಾರಿಗೆ ಬಸ್‍ಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದ ಸಿಬ್ಬಂದಿ ಮತ್ತು ನೌಕರರಲ್ಲಿ ಗೊಂದಲದ ವಾತಾವರಣ ಉಂಟಾಗಿದೆ. ಮುಷ್ಕರದ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸಭೆಗಳು, ಧರಣಿಗಳು ನಡೆದಿರಲಿಲ್ಲ. ಬದಲಾಗಿ ಸಿಬ್ಬಂದಿ ತಮ್ಮ ಮನೆಯಲ್ಲೇ ಉಳಿದುಕೊಂಡು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸುತ್ತಿದ್ದರು. ಸಾರಿಗೆ ನೌಕರರ ಒಕ್ಕೂಟ ಮುಷ್ಕರದ ನೇತೃತ್ವ ವಹಿಸಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಅದರ ಮುಂದಾಳಾಗಿದ್ದರು.

ಇಂದು ಬೆಳಗ್ಗೆ ಪೊಲೀಸರು ತಮ್ಮನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿಚಂದ್ರಶೇಖರ್, ನನ್ನ ಬಂಧನಕ್ಕೆ ಕಾರಣ ಗೊತ್ತಿಲ್ಲ. ಇದು ತಪ್ಪು. ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ.

ಸಾರ್ವಜನಿಕ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೌಕರರು ಮುಷ್ಕರ ಮುಂದುವರಿಸಿದ್ದಾರೆ. ಸರ್ಕಾರ ತನ್ನ ಪಟ್ಟು ಸಡಿಲಿಸಿಲ್ಲ. ನೌಕರರು ಸರ್ಕಾರದ ಯಾವುದೇ ಬೆದರಿಕೆಗಳಿಗೆ ಮಣಿದಿಲ್ಲ ಹಾಗೂ ನಿನ್ನೆ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಿದೆ.

ಕರ್ತವ್ಯಕ್ಕೆ ಹಾಜರಾಗುವಂತೆ ಹಲವಾರು ಬಾರಿ ಮನವಿ ಕೂಡ ಮಾಡಿದೆ. ಶೇ.8ರಷ್ಟು ವೇತನ ಹೆಚ್ಚಳ ಮಾಡುವ ಭರವಸೆಯನ್ನೂ ನೀಡಿದೆ. ಆದರೆ, ನೌಕರರು 6ನೆ ವೇತನ ಆಯೋಗದ ಶಿಫಾರಸು ಜಾರಿ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಏ.12ರಿಂದ ಮುಷ್ಕರ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಸರ್ಕಾರ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಿದ್ದು, ಹೋರಾಟದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಲ್ಲದೆ, ಸಾರ್ವಜನಿಕರಿಗೆ ಖಾಸಗಿ ಬಸ್‍ಗಳ ಮೂಲಕ ಸೇವೆ ಒದಗಿಸಿದೆ. ಈ ನಡುವೆ ಸಾವಿರಾರು ಸಾರಿಗೆ ಬಸ್‍ಗಳು ಕೂಡ ಸಂಚರಿಸಲು ಪ್ರಾರಂಭಿಸಿವೆ. ಸಾರಿಗೆ ನೌಕರರ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments