ಎಸ್ಮಾ ಜಾರಿ ಸರಿಯಾದ ಕ್ರಮವಲ್ಲ : ಕೋಡಿಹಳ್ಳಿ ಚಂದ್ರಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8- ಆಲೋಚನೆ ಮಾಡಿ ತೀರ್ಮಾನ ಮಾಡುವ ಬದಲು ಎಸ್ಮಾ ಜಾರಿ ಮಾಡಲು ಮುಂದಾಗುವ ಕ್ರಮ ಸರಿಯಲ್ಲ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊಂದು ನಿಗಮಕ್ಕೂ ಒಂದೊಂದು ನೀತಿ ಇದೆ. ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ವೇತನ ಕೊಡಬೇಕು ಎಂಬುದು ನಮ್ಮ ನ್ಯಾಯಬದ್ಧ ಬೇಡಿಕೆ. ಇದರಲ್ಲಿ ಯಾವುದೇ ಅನ್ಯಾಯ ಕಾಣುತ್ತಿಲ್ಲ. ಇದರ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು.

ಅದನ್ನು ಬಿಟ್ಟು ಎಸ್ಮಾ ಜಾರಿ ಮಾಡುತ್ತೇವೆ, ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುವುದು ಸರಿಯಾದ ಕ್ರಮವಲ್ಲ. ಬಿಡಬ್ಲ್ಯೂಎಸ್‍ಎಸ್‍ಬಿಗೆ ಒಂದು ನೀತಿ, ಸಾರಿಗೆ ಇಲಾಖೆಗೆ ಒಂದು ನೀತಿ ಇದೆ. 71 ನಿಗಮ ಮಂಡಳಿ ನೌಕರರಿಗೆ ವೇತನ ಪಾವತಿಸಲಾಗುತ್ತದೆ. ಆದರೆ, ಸಾರಿಗೆ ಇಲಾಖೆಯಲ್ಲಿ ಸರಿಯಾದ ವೇತನ ನೀಡುತ್ತಿಲ್ಲ. ಏಕೆ ಈ ಮಲತಾಯಿ ಧೋರಣೆ ಎಂದು ನಾವು ಪ್ರಶ್ನಿಸಿದ್ದೇವೆ.

ಮಾರ್ಚ್‍ನಲ್ಲಿ ಕೆಲಸ ಮಾಡಿರುವ ನೌಕರರಿಗೆ ಸಂಬಳ ಕೊಡದಿರುವುದು ಸರಿಯಾದ ಕ್ರಮವೆ? ಅದನ್ನು ಸುಧಾರಿಸಲು ಏಕೆ ಯೋಚನೆ ಮಾಡುತ್ತಿಲ್ಲ. ಶಾಂತಿಯುತವಾಗಿ ಹೋರಾಟ ಮಾಡಬೇಕು. ಯಾರೂ ಅಡ್ಡಿಪಡಿಸಬಾರದು. ಈ ಹೋರಾಟದಲ್ಲಿ ನನ್ನ ವೈಯಕ್ತಿಕ ಲಾಭ ಏನಿಲ್ಲ. ನನಗೆ ಯಾವುದೇ ಬಾಟಾ ಸಿಗುವುದಿಲ್ಲ. ದುಡಿಯುವ ನೌಕರರಿಗೆ ಸೌಲಭ್ಯ ಸಿಗಬೇಕು. ಚಂದ್ರಶೇಖರ್ ಯಾರು, ಇಲ್ಲಿಗೆ ಏಕೆ ಬಂದರು ಎಂದು ಕೇಳಬಹುದು. ನೌಕರರ ಹೋರಾಟ ನ್ಯಾಯಬದ್ಧವಾಗಿದೆಯೇ ಎಂಬುದರ ಬಗ್ಗೆ ಚಿಂತಿಸಬೇಕು ಎಂದರು.

ತರಬೇತಿಯಲ್ಲಿರುವವರ ಅವಧಿ ಮುಗಿದಿಲ್ಲ. ಅಂತಹವರನ್ನು ಸೇವೆಗೆ ತರುವುದು ಸರಿನಾ? ಇದು ಅತ್ಯಂತ ಅಪಾಯಕಾರಿ. ಸರ್ಟಿಫಿಕೆಟ್ ನೀಡಿ ಡ್ರೈವಿಂಗ್‍ಗೆ ಕೂರಿಸಬೇಕು. ಅಲ್ಲಿಯವರೆಗೆ ಜನರು ಬಸ್ ಹತ್ತಬಾರದು. ನಾವು 6ನೆ ವೇತನ ಆಯೋಗ ಜಾರಿಗೆ ತನ್ನಿ ಎಂದು ಹೇಳಿರಲಿಲ್ಲ. ನೆರೆಯ ರಾಜ್ಯದಲ್ಲಿರುವಂತೆ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದೆವು. ಆದರೆ, ಸಚಿವರೇ 6ನೆ ವೇತನ ಮಾಡುವುದಾಗಿಯೂ ಹೇಳಿದ್ದರು. ಅವರೇ ಹೇಳಿದಂತೆ ಅದನ್ನು ಜಾರಿಗೆ ತರಲಿ ಎಂದು ಹೇಳಿದರು.

ಆಡಳಿತದ ಕಪಿಮುಷ್ಟಿಯಲ್ಲಿ ಸಿಲುಕಿರುವ ನೌಕರರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಬಾರದು. ಇನ್ಸುರೆನ್ಸ್ ಇಲ್ಲದ ಬಸ್‍ಗಳನ್ನು ಓಡಿಸುತ್ತಿದ್ದಾರೆ. ಅನಾಹುತವಾದರೆ ಯಾರು ಹೊಣೆ? ಹೀಗೇ ಮುಂದುವರಿದರೆ ಪ್ಯಾಂಡಮಿಕ್ ಆ್ಯಕ್ಟ್ ಅಡಿಯಲ್ಲಿ ಬಂಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ಬಂಧನ ಮಾಡಲಿ, ನಾನು ಸಿದ್ಧವಾಗಿದ್ದೇನೆ. ಜನರಿಗೆ ಯಾವ ಕಾರಣಕ್ಕೆ ಬಂಧನ ಮಾಡಿದರು ಎಂಬುದನ್ನು ತಿಳಿಸಲಿ. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದರು.

Facebook Comments