ಗಣೇಶ ವಿಸರ್ಜನೆ ವೇಳೆ 6 ಮಕ್ಕಳು ನೀರು ಪಾಲು, ಶೋಕದಲ್ಲಿ ಮುಳುಗಿದ ಮರದಘಟ್ಟ ಗ್ರಾಮ

ಈ ಸುದ್ದಿಯನ್ನು ಶೇರ್ ಮಾಡಿ

ಕೆಜಿಎಫ್, ಸೆ.11- ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗಿದ್ದ ಆರು ಪುಟ್ಟ ಮಕ್ಕಳು ಕುಂಟೆಯಲ್ಲಿ ಮುಳುಗಿ ಮೃತಪಟ್ಟ ಘಟನೆಯಿಂದ ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿ ಮರದಘಟ್ಟ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಹಪಾಟಿಗಳನ್ನು ಕಳೆದುಕೊಂಡು ರೋಧಿಸುತ್ತಿದುದು ಕಂಡುಬಂದಿತು.

ಗ್ರಾಮದ ವೈಷ್ಣವಿ (11), ರೋಹಿತ್ (10), ತೇಜಶ್ರೀ (11), ರಕ್ಷಿತ (8), ವೀಣಾ ( 11), ಧನುಷ್ (7) ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೆÇೀಷಕರನ್ನು ಇಡೀ ಗ್ರಾಮದ ಜನತೆ ಬಂದು ಸಂತೈಸುತ್ತಿದ್ದರು. ಕಳೆದ ವರ್ಷವಷ್ಟೇ ಪತಿಯನ್ನು ಕಳೆದುಕೊಂಡಿದ್ದ ಉಷಾ ಈಗ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಇವರನ್ನು ಸಮಾಧಾನಪಡಿಸಲು ಯಾರಿಂದಲೂ ಸಾಧ್ಯವಾಗದೆ ಇಡೀ ಗ್ರಾಮವೇ ಮಮ್ಮಲ ಮರುಗುತ್ತಿದೆ.

ಶವ ಸಂಸ್ಕಾರ: ಆರು ಮಕ್ಕಳ ಶವ ಸಂಸ್ಕಾರವನ್ನು ಒಂದೇ ಜಾಗದಲ್ಲಿ ಪೆÇೀಷಕರು ಮತ್ತು ಸುತ್ತಮುತ್ತಲ ಗ್ರಾಮಸ್ಥರ ಆಕ್ರಂಧನದ ನಡುವೆ ನೆರವೇರಿಸಲಾಯಿತು.
ಆಕ್ರೋಶ: ಗ್ರಾಮದಲ್ಲಿ ಮರಳು ದಂಧೆ ಮೇರೆ ಮೀರಿದ್ದು, ಮರಳು ತೆಗೆಯಲು ಆಳುದ್ದದ ಗುಂಡಿಗಳನ್ನು ತೋಡಿದ್ದರಿಂದ ಮಳೆ ಬಂದು ಗುಂಡಿಯಲ್ಲಿ ನೀರು ನಿಂತಿರುವುದೇ ಮಕ್ಕಳು ಸಾವನ್ನಪ್ಪಲು ಕಾರಣವಾಗಿದೆ.

ಪುಟ್ಟ ಮಕ್ಕಳು ತಾವೇ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಸಿಹಿ ವಿತರಿಸಿ ಸಂಭ್ರಮಿಸಿದ್ದರು. ಸಂಜೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ವೇಳೆ ಗುಂಡಿಯ ಆಳ ಅರಿಯದೆ ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ಮರಳು ದಂಧೆಕೋರರೇ ಕಾರಣ. ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಇನ್ನೆಷ್ಟು ಮಂದಿ ಬಲಿಯಾಗಬೇಕೋ ಎಂದು ಗ್ರಾಮದ ಹಿರಿಯರು ಕಿಡಿಕಾರಿದ್ದಾರೆ.

ಪರಿಹಾರ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಸೂಚನೆ ಮೇರೆಗೆ ಮೃತ ಮಕ್ಕಳ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ಚೆಕ್‍ಗಳನ್ನು ಸಂಸದ ಮುನಿಸ್ವಾಮಿ, ಶಾಸಕಿ ರೂಪಕಲಾ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿತರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ರೂಪಕಲಾ, ಶವ ಸಮಸ್ಕಾರ ಮುಕ್ತಾಯವಾದ ನಂತರ ವೈಯಕ್ತಿಕವಾಗಿ ಆರು ಮಕ್ಕಳ ಕುಟುಂಬಕ್ಕೂ ತಲಾ ಒಂದು ಲಕ್ಷ ರೂ. ನೀಡುವುದಾಗಿ ತಿಳಿಸಿದರು. ಶಿಕ್ಷಣ ಇಲಾಖೆಯಿಂದ ಮಕ್ಕಳ ಕುಟುಂಬಕ್ಕೆ ತಲಾ 50 ಸಾವಿರ ರೂ. ಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮದಲ್ಲೇ ಇದ್ದು, ಶಾಲೆಯಲ್ಲಿ ಇಂದು ಯಾವುದೇ ಪಾಠ ಪ್ರವಚನ ನಡೆಯಲಿಲ್ಲ.

Facebook Comments