ದುರ್ಗಾ ಪೂಜೆಯಲ್ಲಿ ಬಾಲಾಕೋಟ್ ವಾಯು ದಾಳಿ ಪ್ರತಿರೂಪ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತಾ, ಸೆ.15- ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಈ ಬಾರಿ ನವರಾತ್ರಿ ಸಂದರ್ಭದಲ್ಲಿ ದುರ್ಗಾ ಪೂಜೆ ವಿಶಿಷ್ಟ ಆಕರ್ಷಣೆಗಳನ್ನು ಒಳಗೊಂಡಿದೆ. ಪಾಕಿಸ್ತಾನದ ಬಾಲಾಕೋಟ್ ಉಗ್ರಗಾಮಿಗಳ ಹಡಗು ತಾಣಗಳ ಮೇಲೆ ಭಾರತೀಯ ವಾಯು ಪಡೆ ನಡೆಸಿದ ಯಶಸ್ವಿ ವೈಮಾನಿಕ ದಾಳಿಯ ಪ್ರತಿರೂಪವನ್ನು ಕೊಲ್ಕತ್ತಾದ ದುರ್ಗಾ ಪೂಜಾ ಸಮಿತಿಯೊಂದು ಸೃಷ್ಟಿಸಲಿದೆ.

ಸರ್ವೋ ಜನಾನಿ ದುರ್ಗಾ ಪೂಜಾ ಸಮಿತಿಯ ಯಂಗ್ ಬಾಯ್ಸ್ ಕ್ಲಬ್ ತನ್ನ 50ನೆ ವರ್ಷಾಚರಣೆ ಪ್ರಯುಕ್ತ ದುರ್ಗಾ ದೇವಿಯ ಸಮೀಪ ಬಾಲಾಕೋಟ್ ಕಾರ್ಯಾಚರಣೆಯ ಪ್ರತಿರೂಪವನ್ನು ಸೃಷ್ಟಿಸುತ್ತಿದೆ.

ಇದಕ್ಕಾಗಿ 65 ಪುಟ್ಟ ಮಾದರಿಗಳನ್ನು ಡಿಜಿಟಲ್ ಪ್ರೊಜೆಕ್ಷನ್ ವ್ಯವಸ್ಥೆಯೊಂದಿಗೆ ಸೃಷ್ಟಿಸುತ್ತಿದೆ. ಬಾಲಾಕೋಟ್ ಮೇಲೆ ಭಾರತೀಯ ಯುದ್ಧ ವಿಮಾನಗಳು ಮಿಂಚಿನ ವೇಗದಲ್ಲಿ ದಾಳಿ ನಡೆಸಿ ಉಗ್ರಗಾಮಿಗಳನ್ನು ಸದೆಬಡಿದ ದೃಶ್ಯಗಳು ಇಲ್ಲಿ ಬಿಂಬಿತವಾಗಲಿದೆ. ಐಎಎಫ್‍ನ ಪುಟ್ಟ ವಿಮಾನಗಳು, ಯೋಧರು ಹಾಗೂ ಫಲಾಯನವಾಗುತ್ತಿರುವ ಮತ್ತು ಸತ್ತು ಬಿದ್ದ ಭಯೋತ್ಪಾದಕರ ಮಾದರಿಗಳನ್ನು ಇಲ್ಲಿ ಮರು ಸೃಷ್ಟಿಸಲಾಗಿದೆ.

ಇದರ ಮತ್ತೊಂದು ಆಕರ್ಷಣೆಯೆಂದರೆ ಐಎಎಫ್‍ನ ವೀರಾಗ್ರಣಿ ಅಭಿನಂದನ್ ವರ್ಧಮಾನ್ ಅವರ ಪುಟ್ಟ ಮಾದರಿಯನ್ನು ಸಹ ಇಲ್ಲಿ ವಿಶೇಷವಾಗಿ ಬಿಂಬಿಸಲಾಗಿದೆ. ಕೊಲ್ಕತ್ತಾದಲ್ಲಿ ನಡೆಯಲಿರುವ ವಿಶ್ವ ವಿಖ್ಯಾತ ದುರ್ಗಾ ಪೂಜೆ ಸಂದಭದಲ್ಲಿ ಬಾಲಾಕೋಟ್ ಕಾರ್ಯಾಚರಣೆ ಪ್ರತಿರೂಪ ವಿಶೇಷ ಆಕರ್ಷಣೆಯಾಗಲಿದೆ.

Facebook Comments