ಭಾರೀ ಮಳೆಗೆ ಕೊಳ್ಳೇಗಾಲ ತತ್ತರ, ಅಪಾರ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಮೇ 18- ಭಾರೀ ಬಿರುಗಾಳಿ ಸಮೇತ ಸುರಿದ ಆಲಿಕಲ್ಲು ಮಳೆಯಿಂದಾಗಿ ಅಪಾರ ಸಾರ್ವಜನಿಕ ಆಸ್ತಿ-ಪಾಸ್ತಿ, ನಷ್ಟ ಉಂಟಾಗಿದೆ. ಪಟ್ಟಣದ ಮುಖ್ಯರಸ್ತೆಗಳಲ್ಲಿ ಹಾಗೂ ಮುಡಿಗುಂಡ, ಬೆಂಡರಹಳ್ಳಿ ಸೇರಿದಂತೆ ಸುತಮುತ್ತಲ ಪ್ರದೇಶಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಮರ ಬಿದ್ದು ಮನೆಗಳು ಮತ್ತು ಬ್ಯೆಕ್‍ಗಳು ಜಖಂಗೊಂಡಿವೆ.

ವಕೀಲ ರಾಮಯ್ಯ ರಸ್ತೆಯಲ್ಲಿ ಮರವೊಂದು ಶಿಕ್ಷಕ ಶಂಕರ್‍ರವರ ಮನೆಯ ಮೇಲೆ ಉರುಳಿ ಬಿದ್ದಿದೆ. ಮನೆಯ ಎರಡು ಬದಿಯ ಗೋಡೆಗಳು ಹಾಗೂ ಹೆಂಚುಗಳು ಪೂರ್ಣ ಜಖಂಗೊಂಡಿದೆ. ಹಾಗೂ ಪೊಲೀಸ್ ಕ್ವಾಟ್ರಸ್‍ನ ಹಿಂಬದಿಯ ಕಾಪೌಂಡ್‍ನ ಬಳಿ ಇದ್ದ ನೀಲಿಗಿರಿ ಮರಗಳು ಮುರಿದು ಬಿದ್ದು ಮುಖ್ಯ ಪೇದೆ ನಟರಾಜು ಟಿವಿಎಸ್ ಜೂಪಿಟರ್ ಹಾಗೂ ಮಧು ಎಂಬುವರ ಬಜಾಜ್ ಡಿಸ್ಕವರಿ ಹಾಗೂ ಒಂದು ವಿದ್ಯುತ್ ಕಂಬ ಜಖಂಗೊಂಡಿದೆ.

ನಾಯಕರ ಚಿಕ್ಕ ಚಾವಡಿ ಬೀದಿಯಲ್ಲಿ ಎರಡು ಮನೆಗಳ ಮೇಲೆ ಮರ ಬಿದ್ದು ಮನೆಯ ಮೇಲ್ಛಾವಣಿ ಹಾಗೂ ಇನ್ನಿತರ ಸಾಮಗ್ರಿಗಳು ಹಾಳಾಗಿದೆ. ಇನ್ನೂ ಉಳಿದಂತೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಅವರು ವಕೀಲ ರಾಮಯ್ಯರ ರಸ್ತೆಗೆ ಭೇಟಿ ನೀಡಿ ಮಳೆ, ಗಾಳಿಯಿಂದ ಎಲ್ಲೆಲ್ಲಿ ಹಾನಿಯಾಗಿದೆ.ಅಂತಹ ಕಡೆಗಳಲ್ಲಿ ರಾಜಸ್ವ ನಿರೀಕ್ಷಕರಿಂದ ಪರಿಶೀಲನೆ ನಡೆಸಿ ಬಳಿಕ ನಷ್ಟಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದರು.

ನಗರಸಭೆ ಆಯುಕ್ತ ನಾಗಶೆಟ್ಟಿ ಮಾತನಾಡಿ, ಬಿರುಗಾಳಿ ಮತ್ತು ಮಳೆಯಿಂದ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

Facebook Comments