ಸರ್ಕಾರಕ್ಕೆ ಬಹುಮತವಿಲ್ಲದ ಕಾರಣ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಶ್ನೆಯೇ ಇಲ್ಲ : ಕೋಟಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.12-ಸರ್ಕಾರಕ್ಕೆ ಬಹುಮತವಿಲ್ಲದ ಕಾರಣ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೂಡಲೇ ನೈತಿಕ ಹೊಣೆ ಹೊತ್ತು ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 16 ಮಂದಿ ಶಾಸಕರು ಸ್ವಯಂಪ್ರೇರಿತರಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಬಹುಮತ ಕಳೆದುಕೊಂಡಿದೆ.ಇತಿಹಾಸದಲ್ಲಿ ಇಂಥ ಪರಿಸ್ಥಿತಿ ಎಂದಿಗೂ ಉದ್ಭವವಾಗಿರಲಿಲ್ಲ ಎಂದು ಟೀಕಿಸಿದರು.

ಸರ್ಕಾರಕ್ಕೆ ಅಧಿವೇಶನ ನಡೆಸುವ ನೈತಿಕತೆಯೇ ಇಲ್ಲ. ಬಹುಮತ ಕಳೆದುಕೊಂಡಿರುವುದರಿಂದ ಯಾವ ಆಧಾರದ ಮೇಲೆ ಅಧಿವೇಶನ ನಡೆಸುತ್ತಾರೋ ಗೊತ್ತಿಲ್ಲ. ಶಾಸಕರೇ ರಾಜೀನಾಮೆ ನೀಡಿರುವಾಗ ವಿಧಾನಸಭೆ ಸ್ಪೀಕರ್ ಅದನ್ನು ಅಂಗೀಕರಿಸದೇ ಇರುವುದು ನೋವಿನ ಸಂಗತಿ ಎಂದು ವಿಷಾದಿಸಿದರು. ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ನಾವು ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ.

ಅಧಿವೇಶನದಲ್ಲಿ ಪ್ರಮುಖ ಮಸೂದೆಗಳು ಅಂಗೀಕಾರವಾಗಬೇಕು. ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳು ಪ್ರಯತ್ನಿಸುತ್ತಿದ್ದಾರೆ. ಅವರ ಯತ್ನ ಫಲ ಕೊಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ರಚಿಸುವ ಸನಿಹದಲ್ಲಿದ್ದು, ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದಾರೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಸಂಶಯ ಬೇಡ. ಈ ವಿಷಯದಲ್ಲಿ ಯಾವುದೇ ಗೊಂದಲವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin