ಕೋಟಿಲಿಂಗೇಶ್ವರ ಆಸ್ತಿ ಹೋರಾಟ ಈಗ ಸ್ವಲ್ಪ ತಣ್ಣಾಗಿದ್ದರೂ, ಶುರುವಾಗಿದೆ ಕಾರಿಗಾಗಿ ಕಿತ್ತಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಕೆಜಿಎಫ್, ಜು.16- ಕೋಟಿಲಿಂಗೇಶ್ವರ ದೇವಾಲಯದ ಧರ್ಮಾಧಿಕಾರಿ ಶ್ರೀ ಸಾಂಬಶಿವಸ್ವಾಮಿ ಮೂರ್ತಿಗಳು ನಿಧನರಾದ ಮೇಲೆ ಅವರ ಆಸ್ತಿಗಾಗಿ ನಡೆಯುತ್ತಿರುವ ಹೋರಾಟ ಈಗ ಸ್ವಲ್ಪ ತಣ್ಣಾಗಿದ್ದರೂ, ಅವರ ಕಾರಿಗಾಗಿ ಮತ್ತೆ ಕಿತ್ತಾಟ ಶುರುವಾಗಿದೆ.

2017 ರ ಜನವರಿ ತಿಂಗಳಲ್ಲಿ ಸ್ವಾಮಿಗಳು ಖರೀದಿ ಮಾಡಿದ್ದ ಕೆಎ 08, ಎಂ.5684 ನಂಬರ್‍ನ ಕಾರು ಈಗ ವಿವಾದಕ್ಕೆ ಸಿಲುಕಿದೆ. ಕಾರಿನ ಮಾಲಿಕತ್ವದ ಬಗ್ಗೆ ದೇವಾಲಯದ ಕಾರ್ಯದರ್ಶಿಯಾಗಿದ್ದ ಕುಮಾರಿ ಮತ್ತು ಈಗಿನ ಧರ್ಮಾಧಿಕಾರಿ ಡಾ.ಶಿವಪ್ರಸಾದ್ ನಡುವೆ ಹಗ್ಗ ಜಗ್ಗಾಟ ನಡೆದಿದೆ.

ಸ್ವಾಮಿಗಳು 2018 ರ ಡಿಸಂಬರ್ 14 ರಂದು ಮೃತಪಟ್ಟಾಗ, ಅವರ ಕಾರು ಶಾಲೆ ಆವರಣದಲ್ಲಿಯೇ ಇತ್ತು. ಕುಮಾರಿ ಅದನ್ನು ಉಪಯೋಗಿಸುತ್ತಿದ್ದರು. ನಂತರ 21 ನೇ ಜೂನ್ ತಿಂಗಳಲ್ಲಿ ಕಾರಿನ ವಿಮೆ ಹಣ 38,625 ರೂ.ಗಳನ್ನು ಪಾವತಿಸಿ ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿಯಲ್ಲಿ ನವೀಕರಣ ಮಾಡಲಾಗಿದ್ದು, ಈ ಘಟನೆ ವಿವಾದಕ್ಕೆ ಕಾರಣವಾಗಿದೆ.

ಕಾರನ್ನು ಈಗ ಸ್ವಾಮಿಗಳ ಪತ್ನಿ ರುಕ್ಮಿಣಿಯವರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಈಗ ಕಾರು ಅವರಿಗೆ ಸೇರಬೇಕು. ಸತ್ತ ವ್ಯಕ್ತಿ ಮೇಲೆ ಬೇರೆಯವರು ವಿಮೇ ಪಾವತಿ ಮಾಡುವುದು ಕಾನೂನು ವಿರೋಧ ಎಂದು ಸ್ವಾಮಿಯವರ ಪುತ್ರ ಮತ್ತು ಧರ್ಮಾಧಿಕಾರಿ ಡಾ.ಶಿವಪ್ರಸಾದ್ ಅವರ ವಾದವಾಗಿದೆ.

ಅವರು ಈ ಸಂಬಂಧವಾಗಿ ಕಾರನ್ನು ಅದರ ಮೂಲ ಒಡತಿಗೆ ಕೊಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಮಹಮದ್ ಸುಜೀತ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಪ್ರಕರಣವನ್ನು ಡಿವೈಎಸ್ಪಿ ಅವರಿಗೆ ತನಿಖೆಗೆ ನೀಡಲಾಗಿದೆ.

ಈ ಮಧ್ಯೆ ನ್ಯೂ ಇಂಡಿಯಾ ಅಶುರೆನ್ಸ ಕಂಪನಿ ಕಾರಿಗೆ ನೀಡಿದ್ದ ವಿಮೆಯನ್ನು ರದ್ದುಗೊಳಿಸಿದೆ. ಕಾರಿನ ಮಾಲಿಕತ್ವವನ್ನು ಬೇರೆಯವರಿಗೆ ವರ್ಗಾವಣೆ ಮಾಡಬಾರದು ಎಂದು ಕುಮಾರಿ ನೀಡಿದ ದೂರನ್ನು ಸಾರಿಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಸಂಬಂಧಿಸಿದವರಿಗೆ ನೋಟಿಸ್ ನೀಡಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಚಿಂತಿಸಿಸುತ್ತಿದ್ದಾರೆ.

Facebook Comments