ಮಹಾರಾಷ್ಟ್ರ ಸಿಎಂ ಕ್ಯಾತೆ, ಕೊಯ್ನಾ ಡ್ಯಾಂನಿಂದ ನೀರು ಹರಿಸಲು ಹಿಂದೇಟು

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.10- ಮುಂಬೈ-ಕರ್ನಾಟಕ ಪ್ರದೇಶಗಳಲ್ಲಿ ನೀರಿನ ಹಾಹಾಕಾರ ತಪ್ಪಿಸಲು ಕೊಯ್ನಾ ಡ್ಯಾಂನಿಂದ ಕೃಷ್ಣಾ ನದಿ ಮತ್ತು ಅದರ ಉಪ ನದಿಗಳಿಗೆ ಎರಡು ಟಿಎಂಸಿ ಅಡಿಗಳಷ್ಟು ನೀರು ಹರಿಸುವುದಾಗಿ ಕರ್ನಾಟಕಕ್ಕೆ ಆಶ್ವಾಸನೆ ನೀಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈಗ ಯು-ಟರ್ನ್ ಆಗಿದ್ದಾರೆ.

ಕೆಲವು ಷರತ್ತುಗಳನ್ನು ವಿಧಿಸಿರುವ ಫಡ್ನವಿಸ್ ಕೊಯ್ನಾ ಆಣೆಕಟ್ಟಿನಿಂದ ನೀರು ಹರಿಸಲು ಹಿಂದೇಟು ಹಾಕಿದ್ದಾರೆ ಎಂದು ಕೃಷ್ಣ ಜಲ ಭಾಗ್ಯ ನಿಗಮದ ಉನ್ನತ ಮೂಲಗಳು ತಿಳಿಸಿವೆ. ಇದರಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಣ ನೀರು ಹಂಚಿಕೆ ವಿಷಯ ಮತ್ತಷ್ಟು ಜಟಿಲವಾಗಿ ಪರಿಣಮಿಸಿದೆ. ಅಲ್ಲದೇ ಮಹಾರಾಷ್ಟ್ರದ ಈ ನಿಲುವಿನಿಂದ ಮುಂಬೈ ಕರ್ನಾಟಕದಲ್ಲಿ ನೀರಿನ ಹಾಹಾಕಾರ ಮತ್ತಷ್ಟು ಉಲ್ಬಣವಾಗಲಿದೆ.

ಮುಂಬೈ-ಕರ್ನಾಟಕ ಭಾಗದಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ಕೊಯ್ನಾ ಡ್ಯಾಮ್‍ನಿಂದ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ಎರಡು ಟಿಎಂಸಿ ಅಡಿಯಷ್ಟು ನೀರು ಹರಿಸುವುದಾಗಿ ಕಳೆದ ತಿಂಗಳು ಫಡ್ನವಿಸ್ ಭರವಸೆ ನೀಡಿದ್ದರು.

ಆದರೆ, ಈಗ ಮಹಾರಾಷ್ಟ್ರದ ಜಾಟ್ ಪ್ರದೇಶಗಳಿಗೆ ಕರ್ನಾಟಕದ ಡ್ಯಾಮ್‍ಗಳಿಂದ ನೀರು ಹರಿಸಬೇಕು. ಆನಂತರವಷ್ಟೇ ಮಹಾರಾಷ್ಟ್ರದ ಕೊಯ್ನಾ ಡ್ಯಾಂನಿಂದ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ನೀರು ಬಿಡುಗಡೆ ಮಾಡುವುದಾಗಿ ಫಡ್ನವಿಸ್ ಷರತ್ತು ವಿಧಿಸಿದ್ದಾರೆ.

ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ನೇತೃತ್ವದ ಬಿಜೆಪಿ ಶಾಸಕರು ಮತ್ತು ಮುಖಂಡರು ಕಳೆದ ತಿಂಗಳು ಮಹಾರಾಷ್ಟ್ರಕ್ಕೆ ತೆರಳಿ ಮುಂಬೈನಲ್ಲಿ ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮುಂಬೈ ಕರ್ನಾಟಕ ಭಾಗದಲ್ಲಿನ ಭೀಕರ ಬರಗಾಲದ ಬಗ್ಗೆ ವಿವರಿಸಿ ತಕ್ಷಣ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ನೀರು ಬಿಡುಗಡೆ ಮಾಡುವಂತೆ ಕೋರಿದ್ದರು.

ಇದಕ್ಕೆ ಸ್ಪಂದಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಎರಡು ಟಿಎಂಸಿ ಅಡಿಗಳಷ್ಟು ನೀರನ್ನು ಕೊಯ್ನಾ ಡ್ಯಾಂನಿಂದ ಹರಿಸುವುದಾಗಿ ತಿಳಿಸಿದ್ದರು. ಆದರೆ, ಈಗ ಷರತ್ತು ನೆಪವೊಡ್ಡಿ ಯು ಟರ್ನ್ ಆಗಿರುವುದು ಮುಂಬೈ ಕರ್ನಾಟಕ ಭಾಗದ ರೈತರು ಮತ್ತು ಜನತೆಯಲ್ಲಿ ಆತಂಕ ಉಂಟುಮಾಡಿದೆ.

Facebook Comments