ತೇಜಸ್ವಿಯವರ ಬದುಕೇ ಆದರ್ಶ

ಈ ಸುದ್ದಿಯನ್ನು ಶೇರ್ ಮಾಡಿ

ಅವರೊಬ್ಬ ಸಮಾಜವಾದಿ ಚಿಂತಕ. ಸಮಾಜದಲ್ಲಿ ತಾಂಡವವಾಡುತ್ತಿದ್ದ ಬಡತನ, ಅಸಮಾನತೆ, ಶೋಷಣೆಯ ಬಗ್ಗೆ ಸಾಹಿತ್ಯದ ಮೂಲಕ ಸದಾ ಧ್ವನಿ ಎತ್ತುತ್ತಿದ್ದ ಅದ್ಬುತ ಲೇಖಕ. ಇಡೀ ಬದುಕಿನ ತುಂಬಾ ರಚಿಸಿದ ಸಾಹಿತ್ಯದಲ್ಲಿ ಕಲೆ, ಸಂಸ್ಕøತಿ, ಪರಿಸರ ಮತ್ತು ಕೃಷಿಯ ವಿಷಯಗಳನ್ನಷ್ಟೇ ಆಧಾರವಾಗಿಟ್ಟುಕೊಂಡು ಹತ್ತಾರು ಕೃತಿಗಳನ್ನು ರಚಿಸಿದ ಮಹಾನ್ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತುಂಬಾ ಸರಳ ವ್ಯಕ್ತಿತ್ವ ನೇರ ನಡೆ-ನುಡಿಯವರು.

ಪಟ್ಟಣ ಜೀವನವನ್ನು ಅಷ್ಟೊಂದು ಇಷ್ಟ ಪಡದೇಸದಾ ಪರಿಸರದೊಟ್ಟಿಗೆ ಬದುಕು ಕಳೆದ ಪರಿಸರ ಪ್ರೇಮಿ. ಬೆಂಗಳೂರಿನಲ್ಲಿ ನೆಲೆಸಲು ಅಂದಿನ ಸರ್ಕಾರಗಳು ಎಲ್ಲ ಅವಕಾಶ ಕೊಟ್ಟರೂ ತಮ್ಮ ಕಡೆಯ ದಿನಗಳವರೆಗೂ ಮಲೆನಾಡಿನ ಮೂಡಿಗೆರೆಯ ಯಾವುದೋ ಒಂದು ಪುಟ್ಟ ಮನೆಯಲ್ಲಿ ಬದುಕನ್ನು ಸವೆಸಿದ ತೇಜಸ್ವಿಯವರು ಬೇರೆ ಸಾಹಿತಿಗಳಿಗಿಂತ ಬಹಳ ಭಿನ್ನವಾಗಿ ಕಾಣಿಸುತ್ತಾರೆ.

ಯಾವುದೇ ಕಾಲ್ಪನಿಕ ವಸ್ತು ವಿಷಯವನ್ನು ತಮ್ಮ ಕೃತಿಗಳಲ್ಲಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳದೆ ಅವರ ಸುತ್ತಮುತ್ತಲಿನ ದೈನಂದಿನ ಬದುಕಿನಲ್ಲಿ ನೋಡಿದ, ಕೇಳಿದ ವಿಚಾರಗಳನ್ನು ಸಾಹಿತ್ಯದ ಮುಖೇನ ಕುತೂಹಲ ಕೆರಳಿಸುವ ರೀತಿಯಲ್ಲಿ ಕಾದಂಬರಿಗಳನ್ನು ಸೃಷ್ಟಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ಇವರಿಗೂ ಸಹ ಸಲ್ಲಬೇಕು. ಚಿದಂಬರ ರಹಸ್ಯ, ಜುಗಾರಿ ಕ್ರಾಸ್ ಪತ್ತೆದಾರಿ ಕಾದಂಬರಿಗಳು ಸಾಹಿತ್ಯ ಪ್ರೇಮಿಗಳ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ.ಅಬಚೂರಿನ ಫೋಷ್ಟಾಫೀಸು, ತಬರನ ಕಥೆ ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ.

ಇವರ ಮತ್ತೊಂದು ಕಾದಂಬರಿ ಕಿರಗೂರಿನ ಗಯ್ಯಾಳಿಗಳು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ರಾಷ್ಟ್ರಕವಿಯಾಗಿದ್ದ ಕುವೆಂಪು ಅವರ ಮುದ್ದಿನ ಮಗನಾಗಿದ್ದ ತೇಜಸ್ವಿ ಅವರದು ಸದಾ ನಿರ್ಲಿಪ್ತ ಭಾವ. ಅವರಿಗೆ ವ್ಯವಸಾಯದ ಚಟುವಟಿಕೆಯಲ್ಲಿ ಸಾಹಿತ್ಯದ ಮೇಲಿದ್ದಷ್ಟೆ ತೀವ್ರ ಆಸಕ್ತಿ ಮತ್ತು ಪ್ರೀತಿ ಇತ್ತು. ಮೂಡಿಗೆರೆಯಲ್ಲಿದ್ದ ಅವರ ಒಡೆತನದ ಕಾಫಿ ತೋಟದಲ್ಲಿ ಕೆಲಸದಾಳುಗಳೊಟ್ಟಿಗೆ ತೇಜಸ್ವಿಯವರು ಸಹ ಕೂಲಿಕಾರರಂತೆ ಕೆಲಸ ಮಾಡುತ್ತಿದ್ದರು.

ಕೃಷಿಗೆ ಸಂಬಂಧಪಟ್ಟಂತೆ ಏನಾದರೂ ಸಮಸ್ಯೆಗಳು ಬಂದಾಗ ಅವರೇ ಮುಂಚೂಣಿಯಲ್ಲಿ ನಿಂತು ರೈತ ಚಳುವಳಿ ಮುಖಾಂತರ ಹೋರಾಟ ಮಾಡುತ್ತಿದ್ದರು. ಇವರು ಅದ್ಭುತ ಛಾಯಾಚಿತ್ರಗಾರ. ದಿನಗಟ್ಟಲೇ ಊಟ-ತಿಂಡಿ ಬಿಟ್ಟು ಕಾಡಿನಲ್ಲಿ ಪ್ರಾಣಿ-ಪಕ್ಷಿಗಳ ಫೋಟೋ ತೆಗೆಯುತ್ತಿದ್ದರು. ಇವರಿಗೆ ಬೆಟ್ಟ-ಗುಡ್ಡವೇ ಪ್ರಪಂಚ. ಮಲೆನಾಡಿನ ಸೌಂದರ್ಯವೇ ಇವರ ಬರವಣಿಗೆಗೆ ಸ್ಪೂರ್ತಿ. ಕ್ರಿಮಿ-ಕೀಟ, ಪ್ರಾಣಿ-ಪಕ್ಷಿ ಇವರಿಗೆ ಬರವಣಿಗೆಯಲ್ಲಿ ಅತ್ಯಂತ ಆಸಕ್ತಿ ಉಂಟುಮಾಡುತ್ತಿದ್ದವು.

ಮಿಂಚುಳ್ಳಿ, ಹಕ್ಕಿಪುಕ್ಕ, ಫ್ಲೈಯಿಂಗ್ ಏರೋಪ್ಲೇನ್ ಮತ್ತು ಇತರೆ ಕೃತಿಗಳು ತೇಜಸ್ವಿಯವರಿಗಿದ್ದ ಪರಿಸರ ಮತ್ತು ವಿಜ್ಞಾನದ ಬಗ್ಗೆ ಅಗಾಧ ಜ್ಞಾನವನ್ನು ತಿಳಿಸುತ್ತವೆ. ಇನ್ನು ಇವರ ಕೌಟುಂಬಿಕ ಜೀವನ ಅತ್ಯಂತ ಸರಳ. ಇಬ್ಬರು ಪುತ್ರಿಯರು ಮತ್ತು ಮಡದಿಯೊಂದಿಗೆ ಒಂದು ಚಿಕ್ಕ ಸಂಸಾರ ಇವರದ್ದಾಗಿತ್ತು.

ಮಡದಿ ರಾಜೇಶ್ವರಿ ಅವರ ಕೈ ರುಚಿಯ ಮಲೆನಾಡಿನ ಖಾದ್ಯಗಳು ಇವರಿಗೆ ತುಂಬಾ ಅಚ್ಚುಮೆಚ್ಚಿನ ಊಟ. ನಾನು ಅಕ್ಷರ ಲೋಕದ ಬೆನ್ನು ಬಿದ್ದಿರುವ ಸನ್ಯಾಸಿ. ಈ ಸನ್ಯಾಸಿಗ್ಯಾಕೆ ಪದವಿ, ಅಧಿಕಾರದ ಮೋಹ ಎಂದು ಹೇಳಿ ಪೂರ್ಣಚಂದ್ರ ತೇಜಸ್ವಿಯವರು ಮನೆ ಬಾಗಿಲಿಗೆ ಬಂದ ವಿಧಾನ ಪರಿಷತ್ ಸದಸ್ಯತ್ವದ ಅವಕಾಶವನ್ನು ತಿರಸ್ಕರಿಸಿದರಂತೆ. ಸದಾ ಕಾಡು-ಮೇಡು ಸುತ್ತಿಕೊಂಡು ಇರುತ್ತಿದ್ದ ತೇಜಸ್ವಿ ಅವರು ತಮ್ಮ ನೆಚ್ಚಿನ ಮನೆಗೆ ಇಟ್ಟಿದ್ದ ಹೆಸರು ನಿರುತ್ತರ.

ಇದೇ ಮನೆಯಲ್ಲಿದ್ದುಕೊಂಡೇ 40 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರಕ್ಕೆ ಹಲವಾರು ಕೃತಿಗಳನ್ನು ಕೊಡುಗೆ ನೀಡಿದರು. ಹಲವು ಆಂಗ್ಲ ಭಾಷೆಯ ಕಾದಂಬರಿಗಳನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹೀಗೆ ಯಾವ ಲಾಭಿಯನ್ನು ಮಾಡದೇ ಹಲವಾರು ಪ್ರಶಸ್ತಿಗಳನ್ನು ತೇಜಸ್ವಿಯವರು ಗಳಿಸಿದರೂ ಸಹ ಅದರ ಬಗ್ಗೆ ಎಂದಿಗೂ ಅವರು ಸಡಗರ ಪಡಲಿಲ್ಲ. ಹಮ್ಮು-ಬಿಮ್ಮು ತೋರಿಸಲಿಲ್ಲ. ಅಲ್ಲಿಯೂ ಸಹ ನಿರ್ಲಿಪ್ತ ಭಾವ. ಅರ್ಥಪೂರ್ಣ ಬದುಕನ್ನು ಕಳೆದ ಮಹಾನ್ ಕವಿ ತನ್ನ 69ನೆ ವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿ ತಮ್ಮ ಕೃತಿಗಳನ್ನು ಸಾಹಿತ್ಯ ಪ್ರೇಮಿಗಳಲ್ಲಿ ಜೀವಂತವಾಗಿ ಉಳಿಸಿ ಹೋಗಿರುವ ಮಹಾನ್ ಚೇತನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಹುಟ್ಟಿದ ಜನ್ಮದಿನ ಇಂದು.

ಅವರ ಸರಳ ವ್ಯಕ್ತಿತ್ವದ ಜೀವನ ನಮ್ಮೆಲ್ಲರಿಗೂ ಜೀವಂತ ಆದರ್ಶ. ಬರವಣಿಗೆಗಿಂತ ಬರೀ ಪ್ರಶಸ್ತಿ ಪುರಸ್ಕಾರಕ್ಕೆ ಹಾತೊರೆಯುವ ಇಂದಿನ ಅದೆಷ್ಟೋ ಸಾಹಿತಿಗಳಿಗೆ ಇವರ ಬದುಕು ದೊಡ್ಡ ರೋಲ್ ಮಾಡೆಲ್ ಎಂದು ಹೇಳಿದರೆ ತಪ್ಪಾಗಲಾರದು.

# ಮಹಾಂತೇಶ್ ಬ್ರಹ್ಮ

Facebook Comments