ಮಾದಿಗ ಸಮುದಾಯಕ್ಕೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.23- ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯಕ್ಕೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ನೇತೃತ್ವದ ನಿಯೋಗ ಇಂದು ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿದೆ. ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಬಲಗೈ ಸಮುದಾಯದ ಮಾಜಿ ಸಂಸದ ದೃವನಾರಾಯಣ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ.

ಅದರ ಬೆನ್ನ ಹಿಂದೆಯೇ ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮಾದಿಗ ಸಮುದಾಯದ ಮುಖಂಡರು, ತಮ್ಮ ಸಮುದಾಯಕ್ಕೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಲು ಒತ್ತಾಯಿಸಿದ್ದಾರೆ. ಪರಿಶಿಷ್ಟರಲ್ಲಿ ಮಾದಿಗ ಸಮುದಾಯ ಹೆಚ್ಚಿನ ಜನಸಂಖ್ಯೆ ಹೊಂದಿದೆ.

ಈವರೆಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮಾದಿಗ ಸಮುದಾಯದ ಕೊಡುಗೆ ಹೆಚ್ಚಿನದಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ ಎಂಬ ಅಸಮಾಧಾನ ಕೇಳಿ ಬರುತ್ತಿದೆ. ಹೀಗಾಗಿ ಕೆಪಿಸಿಸಿಯಲ್ಲಿ ಪಕ್ಷದ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಹಿರಿಯರನ್ನು ಒತ್ತಾಯಿಸಿರುವುದಾಗಿ ನಿಯೋಗದಲ್ಲಿದ್ದ ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ನಿಯೋಗದಲ್ಲಿ ಮಾಜಿ ಸಂಸದ ಕೆ.ಬಿ.ಕೃಷ್ಣಮೂರ್ತಿ, ಮುಖಂಡರಾದ ವೆಂಕಟೇಶ್, ಮಾನಯ್ಯ, ಶಂಕರ್, ಸುರೇಶ್ ಮತ್ತಿತರರಿದ್ದರು.

Facebook Comments