ಕೆಪಿಸಿಸಿಯಲ್ಲಿ ತೆರವಾಗಿರುವ ಸ್ಥಾನಗಳಿಗೆ ತಿಂಗಳಾಂತ್ಯದಲ್ಲಿ ಹೊಸಬರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24-ಕೆಪಿಸಿಸಿ ವಿಸರ್ಜನೆ ಮಾಡಿರುವುದರಿಂದ ತೆರವಾಗಿರುವ ಸ್ಥಾನಗಳಿಗೆ ತಿಂಗಳಾಂತ್ಯದವರೆಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿ ಪಕ್ಷದ ಸಂಘಟನೆಗೆ ಬಲ ನೀಡುವ ತಯಾರಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೊರತುಪಡಿಸಿ ಕೆಪಿಸಿಸಿಯ 20 ಮಂದಿ ಉಪಾಧ್ಯಕ್ಷರು, 70 ಮಂದಿ ಪ್ರಧಾನಕಾರ್ಯದರ್ಶಿಗಳು, 210 ಮಂದಿ ಕಾರ್ಯದರ್ಶಿಗಳನ್ನು ಹೈಕಮಾಂಡ್ ಅನೂರ್ಜಿತಗೊಳಿಸಿದೆ.

ಸದ್ಯಕ್ಕೆ ಇವರೆಲ್ಲರೂ ಹಂಗಾಮಿ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಬಾರಿ ಪರಮೇಶ್ವರ್ ಅವರು ರಾಜಕೀಯ ಪರಿಸ್ಥಿತಿಗಳ ಹೊಂದಾಣಿಕೆ ಸಂಬಂಧವಾಗಿ ಸುಮಾರು 300ಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳನ್ನು ನೇಮಿಸಿದ್ದರು.

ಹೀಗಾಗಿ ಕೆಪಿಸಿಸಿ ಗಜ ಗಾತ್ರದ ತೂಕ ಹೊಂದಿತ್ತು. ಬಹಳಷ್ಟು ಮಂದಿ ಪದಾಧಿಕಾರಿಗಳು ಕೆಲಸ ಮಾಡದೆ ಕೇವಲ ವಿಸಿಟಿಂಗ್ ಕಾರ್ಡ್‍ಗಳ ಮೂಲಕ ಸ್ವಹಿತಾಸಕ್ತಿ ಕಾಪಾಡಿಕೊಳ್ಳುತ್ತಿದ್ದರು. ಅದಕ್ಕೆಲ್ಲ ಬ್ರೇಕ್ ಹಾಕಲು ಹೈಕಮಾಂಡ್ ಎಲ್ಲಾ ಪದಾಧಿಕಾರಿಗಳನ್ನು ಅನೂರ್ಜಿತಗೊಳಿಸಿದೆ. ಹೊಸ ಪದಾಧಿಕಾರಿಗಳನ್ನು ಗುರುತಿಸಲಾಗುತ್ತಿದ್ದು, ಈ ಬಾರಿ ಯಾವುದೇ ಮುಖಂಡರ ಶಿಫಾರಸ್ಸಿಗೆ ಮಣಿಯದೆ ಪಕ್ಷಕ್ಕಾಗಿ ದುಡಿಯುವ ಮತ್ತು ಸಮಯ ಮೀಸಲಿಡುವ ಕಾರ್ಯಕರ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಈ ಹಿಂದಿನಂತೆ ನೂರಾರು ಮಂದಿಯನ್ನು ತುಂಬಿಕೊಳ್ಳದೆ ಅತ್ಯಂತ ಚಿಕ್ಕ ಹಾಗೂ ಚೊಕ್ಕ ಸಮಿತಿಯನ್ನು ರಚಿಸಲು ದಿನೇಶ್‍ಗುಂಡೂರಾವ್ ಮುಂದಾಗಿದ್ದಾರೆ. ಎಐಸಿಸಿ ದಿನೇಶ್‍ಗುಂಡೂರಾವ್ ಅವರಿಗೆ ಸಂಪೂರ್ಣ ಅಧಿಕಾರ ನೀಡಿದ್ದು, ಪದಾಧಿಕಾರಿಗಳ ನೇಮಕಾತಿಗೆ ಕೆಪಿಸಿಸಿ ಅಧ್ಯಕ್ಷರ ಮಾತೇ ಅಂತಿಮ ಎಂಬ ನಿರ್ದೇಶನ ನೀಡಲಾಗಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ಯಾರಾದರೂ ಪಕ್ಷದಲ್ಲಿ ಪದಾಧಿಕಾರಿ ಹುದ್ದೆ ಗಿಟ್ಟಿಸಲು ಪ್ರಯತ್ನಿಸಿದರೆ ಅದು ವ್ಯರ್ಥ ಪ್ರಯತ್ನವಾಗುತ್ತದೆ. ದಿನೇಶ್‍ಗುಂಡೂರಾವ್ ಅವರು ಯಾವುದೇ ಲಾಬಿಗಳಿಗೆ ಮಣಿಯದೆ ನೇರವಾಗಿ ನಿಷ್ಠಾವಂತರನ್ನು ಆಯ್ದುಕೊಳ್ಳುತ್ತಿದ್ದಾರೆ.

ಈ ತಿಂಗಳ ಅಂತ್ಯದೊಳಗೆ ಕೆಪಿಸಿಸಿಗೆ ಹೊಸ ಸಾರಥಿಗಳ ನೇಮಕವಾಗುವ ಸಾಧ್ಯತೆಗಳಿವೆ. ರಾಜ್ಯ ವಿಧಾನಸಭೆಗೆ ಯಾವುದೇ ಹಂತದಲ್ಲಿ ಮಧ್ಯಂತರ ಚುನಾವಣೆ ನಡೆದರೂ ಅದನ್ನು ಎದುರಿಸಲು ಕಾಂಗ್ರೆಸ್ ಸಜ್ಜುಗೊಳ್ಳುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ