ಕೆಪಿಸಿಸಿ ಪುನರ್ ರಚನೆಗೆ ರಾಜ್ಯದ ನಾಯಕರ ಜೊತೆ ವೇಣುಗೋಪಾಲ್ ಮಹತ್ವದ ಸಮಾಲೋಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ಕೆಪಿಸಿಸಿಯ ಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು ರಾಜ್ಯದ ಪ್ರಮುಖ ನಾಯಕರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು. ಲೋಕಸಭೆ ಚುನಾವಣೆ ಬಳಿಕ ಕಠಿಣ ಕ್ರಮ ಕೈಗೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಯ ಪದಾಧಿಕಾರಿಗಳನ್ನು ವಜಾ ಮಾಡಿದ್ದಾರೆ.

ಸುಮಾರು 20 ಮಂದಿ ಉಪಾಧ್ಯಕ್ಷರು, 250ಕ್ಕೂ ಹೆಚ್ಚು ಮಂದಿ ಕಾರ್ಯದರ್ಶಿಗಳು, 70ಕ್ಕೂ ಹೆಚ್ಚು ಮಂದಿ ಪ್ರಧಾನ ಕಾರ್ಯದರ್ಶಿಗಳಿದ್ದ ಗಜ ಗಾತ್ರದ ಕೆಪಿಸಿಸಿ ಪದಾಧಿಕಾರಿಗಳ ಸಮಿತಿಯನ್ನು ಮುಲಾ ಜಿಲ್ಲದೆ ವಿಸರ್ಜನೆಗೊಳಿಸಲಾಗಿದೆ.

ಈಗ ಪಕ್ಷ ಸಂಘಟನೆಗೆ ಸಮಯ ಮೀಸಲಿಡುವ ಮತ್ತು ಶ್ರಮ ವಹಿಸಿ ದುಡಿಯುವ ಪದಾಧಿಕಾರಿಗಳನ್ನು ನೇಮಿಸಲು ಕಾಂಗ್ರೆಸ್ ಮುಂದಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಈಗಾಗಲೇ ಸಂಭವನೀಯ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.

ಈ ಮೊದಲಿನಂತೆ ಮುಖಂಡರುಗಳ ಶಿಫಾರಸು ಆಧರಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳದೆ ಪಕ್ಷನಿಷ್ಠರು, ಸಂಘಟನೆಗಾಗಿ ಕೆಲಸ ಮಾಡುವವರನ್ನು ಆಯ್ದುಕೊಳ್ಳಲಾಗಿದೆ. ತಮ್ಮ ಸಂಭವನೀಯ ಪಟ್ಟಿಯ ಬಗ್ಗೆ ಇಂದು ಹಿರಿಯ ನಾಯಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕಾಂಗ್ರೆಸ್‍ನ ಹಿರಿಯ ನಾಯಕರು ಸೇರಿದಂತೆ ಹಲವಾರು ಮಂದಿ ಈ ಸಭೆಯಲ್ಲಿ ಭಾಗವಹಿಸಿದ್ದರು.

Facebook Comments