ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲು ಹೊರಟಿದೆ ಸರ್ಕಾರ : ಕೆಪಿಸಿಸಿ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.22- ಕೃಷಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೆ ತರುತ್ತಿರುವುದಾಗಿ ಹೇಳಿದ್ದ, ರಾಜ್ಯ ಸರ್ಕಾರ ಈಗ ಕೈಗಾರಿಕೆಗಳಿಗೆ ಭೂಮಿ ನೀಡುವ ಸಲುವಾಗಿ ಕಾನೂನು ಬದಲಾವಣೆ ಮಾಡುತ್ತಿರುವುದಾಗಿ ಹೇಳುತ್ತಿದೆ ಎಂದು ಕೆಪಿಸಿಸಿ ಆಕ್ಷೇಪ ವ್ಯಕ್ತ ಪಡಿಸಿದೆ.

ಜೂ.11ರ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಸೆಕ್ಸನ್ 73 ಎ,ಬಿ,ಸಿ ಮತ್ತು 80 ಮತ್ತು 63ಕ್ಕೆ ತಿದ್ದುಪಡಿ ತರಲಾಗಿದೆ. ಇದರಿಂದ ಕೃಷಿ ಭೂಮಿ ಖರೀದಿಗೆ ಈವರೆಗೂ ಇದ್ದ ಕೆಲವು ತೊಡಕುಗಳನ್ನು ನಿವಾರಣೆ ಮಾಡಲಾಗಿದೆ.

25 ಲಕ್ಷ ರೂಪಾಯಿಗಿಂತ ಹೆಚ್ಚಿನ ಕೃಷಿಯೇತರ ಆದಾಯ ಇರುವವರು ಭೂಮಿ ಖರೀದಿಸುವಂತಿಲ್ಲ ಎಂಬ ನಿಯಮವನ್ನು ಬದಲಾವಣೆ ಮಾಡಿ ಆದಾಯ ಮಿತಿಯನ್ನು ತೆಗೆದು ಹಾಕಲಾಗಿದೆ.

ಕೃಷಿಕರು ಮತ್ತು ಕೃಷಿ ಕಾರ್ಮಿಕರು ಮಾತ್ರ ಭೂಮಿ ಖರೀದಿಸಬೇಕು ಎಂಬ ನಿಯಮವನ್ನು ಸಡಿಲ ಮಾಡಿ ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂಬ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಮಾಡನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ವಿಧಾನಸಭೆಯಲ್ಲಿ ಚರ್ಚಿಸಿದ ಬಳಿಕವಷ್ಟೆ ಜಾರಿಗೆ ತರಲಾಗುವುದು ಎಂದಿದ್ದರು.

ಆದರೆ ಇತ್ತೀಚೆಗೆ ಕಂದಾಯ ಸಚಿವರು ಹೇಳುತ್ತಿರುವ ಪ್ರಕಾರ ವಿಧಾನಮಂಡಲ ಅಧಿವೇಶನದವರೆಗೂ ಕಾಯದೆ ಸುಗ್ರೀವಾಜ್ಞೆಯ ಮೂಲಕವೇ ಕಾನೂನು ಜಾರಿ ಮಾಡುತ್ತಿರುವುದು ಬಯಲಾಗಿದೆ. ಕೋವಿಡ್-19ರ ಅನುಸಾರ ಇಡೀ ಜಗತ್ತೇ ತಲ್ಲಣಗೊಂಡಿದೆ. ದೇಶಾದ್ಯಂತ ಲಾಕ್ ಡೌನ ಜಾರಿಯಲ್ಲಿದೆ. ಸಾರ್ವಜನಿಕರು, ರೈತರು ಹೊರ ಬಂದು ಪ್ರತಿಭಟನೆ ಮಾಡಲು ಅವಕಾಶ ಇಲ್ಲ.

ಸಾರ್ವಜನಿಕ ಅಭಿಪ್ರಾಯಗಳು ಮುಕ್ತವಾಗಿ ವ್ಯಕ್ತವಾಗುವ ವಾತಾವರಣ ಇಲ್ಲ. ಈ ಸಂದರ್ಭದಲ್ಲಿ ಸುಮಾರು 45 ವರ್ಷದಿಂದ ಜಾರಿಯಲ್ಲಿದ್ದ ಕಾನೂನನ್ನು ಏಕಾಏಕಿ ಬದಲಾವಣೆ ಮಾಡಿ ಜಾರಿಗೆ ತರಲು ಸರ್ಕಾರ ಮುಂದಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುಧೀರ್ಘ ಪತ್ರ ಬರೆದು ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ಸುಗೀವಾಜ್ಞೆ ಮೂಲಕ ಕಾನೂನು ಜಾರಿ ಮಾಡುವ ಪ್ರಯತ್ನ ನಡೆಯುತ್ತಿದೆ.

ಆರಂಭದಲ್ಲಿ ಕೃಷಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಾನೂನು ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಕಂದಾಯ ಸಚಿವ ಆರ್.ಅಶೋಕ್ ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳಲ್ಲಿ ಕೈಗಾರಿಕೆಗಳಿಗೆ ಭೂಮಿ ನೀಡುವ ಸಲುವಾಗಿ ತಿದ್ದುಪಡಿ ತಂದಿರುದ್ದಾಗಿ ಹೇಳುತ್ತಿದ್ದಾರೆ. ಇದನ್ನೂ ಕಾಂಗ್ರೆಸ್ ವಿರೋಧಿಸಿದೆ.

Facebook Comments