ಬೈಎಲೆಕ್ಷನ್ ಗೆಲ್ಲಲು ಕಾಂಗ್ರೆಸ್ ರಣತಂತ್ರ, ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಗಾಳ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.15- ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಕಾಂಗ್ರೆಸ್ ಪಣತೊಟ್ಟಿದೆ.  ಕಾಂಗ್ರೆಸ್ ಕಚೇರಿಯಲ್ಲಿಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ನೇತೃತ್ವದಲ್ಲಿ ನಡೆದ ವೀಕ್ಷಕರ ಸಭೆಯಲ್ಲಿ ಉಪ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಯಿತು.

ಬಂಡಾಯ, ಬಿಜೆಪಿ ಅಭ್ಯರ್ಥಿಗಳನ್ನು ತನ್ನತ್ತ ಸೆಳೆದು ಕಣಕ್ಕಿಳಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲ ಬಂಡಾಯವಿದ್ದು, ಅದರ ಪ್ರಯೋಜನ ಪಡೆಯುವ ಬಗ್ಗೆ ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಹದಿನೇಳು ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರವನ್ನು ಹೊರತು ಪಡಿಸಿ ಉಳಿದ 15 ಕ್ಷೇತ್ರಗಳ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಅದರಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ , ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರು. ಅಷ್ಟೂ ಮಂದಿ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದರು.ಪಕ್ಷಾಂತರ ನಿಷೇಧ ಕಾಯ್ದೆಯಡಿ ಆಗಿನ ಸ್ಪೀಕರ್ ರಮೇಶ್‍ಕುಮಾರ್ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದ್ದಾರೆ.

ಈ ಕುರಿತ ಪ್ರಕರಣ ಸುಪ್ರೀಂಕೋರ್ಟ್‍ನ ವಿಚಾರಣೆಯಲ್ಲಿದೆ. ಸುಪ್ರೀಂಕೋರ್ಟ್ ಮೊದಲ ಹಂತದ ಚುನಾವಣಾ ಅಧಿಸೂಚನೆಗೆ ತಡೆಯಾಜ್ಞೆ ನೀಡಿದೆ. ಇದನ್ನು ಮೀರಿ ಎರಡನೇ ಹಂತದಲ್ಲಿ ಚುನಾವಣಾ ಆಯೋಗ ಮತ್ತೊಂದು ಅಧಿಸೂಚನೆಯನ್ನು ಜಾರಿಗೊಳಿಸಿದೆ. ಈ ಸಂದರ್ಭದಲ್ಲಿ ಉಪ ಚುನಾವಣೆ ನಡೆಯಲಿದೆಯೋ ಇಲ್ಲವೋ ಎಂಬ ಗೊಂದಲ ಎಲ್ಲರನ್ನು ಕಾಡುತ್ತಿದೆ. ಅದರ ನಡುವೆ ಕಾಂಗ್ರೆಸ್ ಚುನಾವಣೆಗೆ ಸಿದ್ದತೆಗಳನ್ನು ಆರಂಭಿಸಿದ್ದು, ಈಗಾಗಲೇ ಮೂರು ಬಾರಿ ಪ್ರಮುಖ ಸಭೆಗಳನ್ನು ನಡೆಸಿದೆ.

ವಿಧಾನಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ಕಳುಹಿಸಿ ಸಂಭವನೀಯ ಅಭ್ಯರ್ಥಿಗಳ ಕುರಿತು ವರದಿ ಪಡೆದುಕೊಂಡಿದೆ. ವರದಿಯಲ್ಲಿ ಪ್ರತಿ ಕ್ಷೇತ್ರಗಳಲ್ಲಿ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳ ಹೆಸರಿವೆ. ಎಲ್ಲೋ ಕುಳಿತು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬದಲಾಗಿ ಕ್ಷೇತ್ರಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ ವೀಕ್ಷಕರ ಜತೆ ಸಮಾಲೋಚನೆ ನಡೆಸಿದರೆ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ನಿಖರ ಮಾಹಿತಿ ಸಿಗಲಿದೆ ಎಂಬ ಕಾರಣಕ್ಕಾಗಿ ಇಂದು ವೀಕ್ಷಕರ ಜತೆ ಸಮಾಲೋಚನೆ ನಡೆಸಲಾಯಿತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಹದಿನೈದು ಕ್ಷೇತ್ರಗಳ ಪೈಕಿ ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದರು. ಉಪ ಚುನಾವಣೆ ನಡೆದಿದ್ದೇ ಆದರೆ ಹುಣಸೂರಿನಲ್ಲಿ ಕಾಂಗ್ರೆಸ್ ಗೆಲುವಿಗೆ ಸುಲಭದ ವಾತಾವರಣ ಇದೆ. ಮಂಜುನಾಥ್ ಅವರನ್ನು ಕಣಕ್ಕಿಳಿಸಿದರೆ ಆ ಕ್ಷೇತ್ರ ನಿರಾಶಾದಾಯಕವಾಗಿ ನಮ್ಮ ಪಾಲಾಗಲಿದೆ ಎಂದು ವೀಕ್ಷಕರು ಅಭಿಪ್ರಾಯ ನೀಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಇದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿ ಗಂಭೀರ ಪರಿಣಾಮ ಬೀರುತ್ತಿದೆ. ಬಿಬಿಎಂಪಿ ಸದಸ್ಯರಾದ ಶಿವರಾಜ್, ಈ ಹಿಂದಿನ ಅಭ್ಯರ್ಥಿಯಾಗಿದ್ದ ಎನ್‍ಎಸ್‍ಯುಐ ಅಧ್ಯಕ್ಷ ಮಂಜುನಾಥ್‍ಗೌಡ, ಮುಖಂಡ ಗಿರೀಶ್ ಕೆ.ನಾಶಿ ಅವರು ಆಕಾಂಕ್ಷಿಗಳಾಗಿದ್ದಾರೆ. ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಜತೆಗೆ ಸ್ಥಳೀಯ ನಾಯಕರಲ್ಲಿ ಒಗ್ಗಟ್ಟು ಮೂಡಿಸಿದರೆ ಕ್ಷೇತ್ರವನ್ನು ಗೆಲ್ಲಲು ಪ್ರಯತ್ನಿಸಬಹುದು ಎಂದು ವೀಕ್ಷಕರು ಸಲಹೆ ನೀಡಿದ್ದಾರೆ.

ಕೆ.ಆರ್.ಪುರಂ, ಶಿವಾಜಿನಗರ, ಹೊಸಕೋಟೆ ಕ್ಷೇತ್ರ ಸೇರಿದಂತೆ 15 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆ.ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರಾಗಿ ಕೆಲಸ ಮಾಡಿದವರ ಜತೆಗೆ ಚುನಾವಣಾ ವೀಕ್ಷಕರನ್ನು ನೇಮಿಸಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿ ಕ್ಷೇತ್ರಕ್ಕೂ ತಲಾ ಇಬ್ಬರು ಮಾಜಿ ಸಚಿವರು, ನಾಲ್ಕು ಮಂದಿ ಶಾಸಕರನ್ನು ಹಾಗೂ ಹಿರಿಯ ನಾಯಕರನ್ನು ವೀಕ್ಷಕರಾಗಿ ನೇಮಿಸಲು ನಿರ್ಣಯ ಕೈಗೊಳ್ಳಲಾಗಿದೆ.

Facebook Comments