ಕೆಪಿಸಿಸಿಯಲ್ಲಿ ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳೇನು ಎಂಬ ಅಂಶಗಳನ್ನು ಇಂದು ಕೆಪಿಸಿಸಿ ಪರಾಮರ್ಶೆ ನಡೆಸಿದೆ.
ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರುಗಳು ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳ ಸಭೆ ನಡೆಸಿದರು.

ಸಭೆಯಲ್ಲಿ ಮಾಜಿ ಸಂಸದರಾದ ಕೆ.ಎಚ್.ಮುನಿಯಪ್ಪ, ಚಂದ್ರಪ್ಪ, ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ವಿನಯ್‍ಕುಲಕರ್ಣಿ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡ ಮಿಥುನ್‍ರೈ ಸೇರಿದಂತೆ ಅನೇಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಲೋಕಸಭೆ ಚುನಾವಣೆ ನಂತರ ಹಲವಾರು ಬಾರಿ ಸಭೆಗಳು ನಡೆದಿವೆಯಾದರೂ ಇದೇ ಮೊದಲ ಬಾರಿಗೆ ಸೋಲಿನ ಪರಾಮರ್ಶೆ ನಡೆಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ಕ್ಷೇತ್ರದ ಸೋಲಿಗೆ ಕಾರಣಗಳನ್ನು ಲಿಖಿತ ವರದಿ ಮೂಲಕ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು 21 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ 20 ಕ್ಷೇತ್ರದಲ್ಲಿ ಸೋತು ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಚುನಾವಣೆ ಸೋಲಿನ ಬಗ್ಗೆ ಈಗಾಗಲೇ ಕಾಂಗ್ರೆಸ್‍ನ ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ರೋಷನ್‍ಬೇಗ್, ಕೆ.ಎನ್.ರಾಜಣ್ಣ ಸೇರಿದಂತೆ ಹಲವಾರು ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ.

ಸೋಲಿನ ಕಾರಣಗಳನ್ನು ಹುಡುಕಲು ಕೆಪಿಸಿಸಿ ವಿ.ಆರ್.ಸುದರ್ಶನ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿದೆ. ಸಮಿತಿ ಜಿಲ್ಲಾ ಮಟ್ಟಗಳಲ್ಲಿ ಪ್ರವಾಸ ಮಾಡಿ ಸೋಲಿನ ಕಾರಣಗಳನ್ನು ಅಧ್ಯಯನ ಮಾಡುತ್ತಿದೆ. ಸಮಿತಿ ಇನ್ನು ವರದಿ ನೀಡಿಲ್ಲ. ಅದಕ್ಕೂ ಮೊದಲೇ ವೇಣುಗೋಪಾಲ್ ಅವರು ಹೈಕಮಾಂಡ್‍ಗೆ ಮಾಹಿತಿ ನೀಡಬೇಕಿದೆ.

ಈ ಹಿನ್ನೆಲೆಯಲ್ಲಿ ಇಂದು ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ, ಸೋಲಿನ ಕಾರಣಗಳನ್ನು ಪರಾಮರ್ಶಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ