ಯಾರಾಗಲಿದ್ದಾರೆ ಕೆಪಿಸಿಸಿ ಅಧ್ಯಕ್ಷರು..! ಅಧಿಕೃತ ಪ್ರಕಟಣೆನೆ ಮತ್ತಷ್ಟು ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.16-ಕೆಪಿಸಿಸಿ ಅಧ್ಯಕ್ಷ ನೇಮಕಾತಿ ವಿಷಯ ಕಗ್ಗಂಟಾಗಿದ್ದು, ಇನ್ನು ಒಂದು ವಾರ ಕಾಲ ವಿಳಂಬವಾಗುವ ಸಾಧ್ಯತೆ ಇದೆ. ಆಕಾಂಕ್ಷಿಗಳ ಪೈಕಿ ಎಂ.ಬಿ.ಪಾಟೀಲ್, ಡಿ.ಕೆ.ಶವಕುಮಾರ್, ಕೆ.ಎಚ್.ಮುನಿಯಪ್ಪನವರ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ನಿನ್ನೆ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಬಳಿಕ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಆದರೆ ಅಧಿಕೃತ ಪ್ರಕಟಣೆಗೆ ವಿಳಂಬವಾಗುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಸ್ಪಷ್ಟನೆ: ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,ನೂತನ ಅಧ್ಯಕ್ಷರ ಆಯ್ಕೆ ಶೀಘ್ರವೇ ನಡೆಯಲಿದೆ. ಆದಷ್ಟು ಬೇಗ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಮಾಡಬೇಕು. ಗೊಂದಲಗಳನ್ನು ಹೆಚ್ಚಿಸಲು ಬಿಡಬಾರದು. ಈ ನಿಟ್ಟಿನಲ್ಲಿ ಈಗಾಗಲೇ ನಾನು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದಿದ್ದಾರೆ.

ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ವಾರದೊಳಗಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ದೆಹಲಿಯಲ್ಲಿನ ಬೆಳವಣಿಗೆಗಳ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ವಾಸ್ತಾವಂಶ ಬೇರೆಯೇ ಇದೆ. ನಿರ್ಧಾರ ಹೊರಬಿದ್ದ ಬಳಿಕ ಸ್ಪಷ್ಟವಾಗಲಿದೆ ಎಂದರು.

ಹೈಕಮಾಂಡ್ ಎಲ್ಲರ ಅಭಿಪ್ರಾಯವನ್ನು ಪಡೆದುಕೊಂಡಿದೆ. ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ. ಅವರು, ಇವರು ಎಂದು ಬೇರೆಲ್ಲಾ ಹೆಸರುಗಳನ್ನು ಹೇಳಲಾಗುತ್ತಿದೆ. ಆದರೆ ಹೈಕಮಾಂಡ್‍ನ ಆಯ್ಕೆ ಭಿನ್ನವಾಗಿದೆ. ಅವರು ಯಾವುದೇ ನಿರ್ಧಾರ ಕೈಗೊಂಡರು ರಾಜ್ಯದ ಎಲ್ಲ ನಾಯಕರು ಬೆಂಬಲ ನೀಡುತ್ತೇವೆ. ರಾಷ್ಟ್ರೀಯ ಪಕ್ಷವಾಗಿರುವುದರಿಂದ ಸಣ್ಣಪುಟ್ಟ ಅಸಮಾಧಾನ, ಭಿನ್ನಮತ ಸಹಜ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗುತ್ತೇವೆ ಎಂದಿದ್ದಾರೆ.

Facebook Comments