ಡಿಕೆಶಿಗೆ ಕೆಪಿಸಿಸಿ ಪಟ್ಟ ಫಿಕ್ಸ್..? ಕಾರ್ಯಾಧ್ಯಕ್ಷರಾಗಿ ನಾಲ್ವರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.17-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುವುದು ಖಚಿತವಾಗಿದ್ದು, ಇಂದು ಸಂಜೆ ಘೋಷಣೆಯಾಗುವ ಸಾಧ್ಯತೆ ಇದೆ. ಸಂಘಟನಾ ಚತುರತೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸಾಮಥ್ರ್ಯ, ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ಒಕ್ಕಲಿಗ ಮುಖಂಡ, ಚುನಾವಣಾ ಗೆಲುವಿನ ಚಾತುರ್ಯತೆ ಇರುವ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ.

ಆದರೆ ಕಾರ್ಯಾಧ್ಯಕ್ಷ ಹುದ್ದೆಗಳ ನೇಮಕದಲ್ಲಿ ಗೊಂದಲ ಏರ್ಪಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು, ನಾಲ್ಕು ದಿಕ್ಕಿನಿಂದಲೂ ಪಕ್ಷ ಸಂಘಟನೆ ಮಾಡಲು ಅನುಕೂಲವಾಗುತ್ತದೆ ಎಂಬ ಪ್ರಸ್ತಾಪ ಮುಂದಿಟ್ಟಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ಅಳೆದು, ತೂಗಿ ಚಿಂತನೆ ನಡೆಸುತ್ತಿದೆ.

ಸಿದ್ದರಾಮಯ್ಯನವರ ಪ್ರಸ್ತಾಪವನ್ನು ಕೈಬಿಡಲಾಗದೆ ಡಿ.ಕೆ.ಶಿವಕುಮಾರ್ ಅವರ ಮನವೊಲಿಕೆ ಯತ್ನವನ್ನು ಮಾಡುತ್ತಿದೆ. ಅಹಮ್ಮದ್ ಪಟೇಲ್, ಗುಲಾಬ್‍ನಬಿ ಆಜಾದ್ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಮನವೊಲಿಸಲು ಮುಂದಾಗಿದೆ.

ಆದರೆ ಡಿ.ಕೆ.ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದು ಬೇಡ. ಈಗಿರುವ ಕಾರ್ಯಾಧ್ಯಕ್ಷರೇ ಸಾಕು. ನಾನು ಎಲ್ಲಾ ಜಾತಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುತ್ತೇನೆ. ನನಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಆದರೆ ಕಾರ್ಯಾಧ್ಯಕ್ಷ ಹುದ್ದೆ ಆಕಾಂಕ್ಷಿಗಳಾದ ಸತೀಶ್ ಜಾರಕಿ ಹೊಳಿ, ಕೃಷ್ಣಭೈರೇಗೌಡ ಮತ್ತಿತರರು ದೆಹಲಿಯಲ್ಲಿ ಲಾಬಿ ಮುಂದುವರೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷಗಾದಿಗೆ ಪ್ರಬಲ ಆಕಾಂಕ್ಷಿಯಾಗಿರುವ ಕೆ.ಎಚ್.ಮುನಿಯಪ್ಪ ಅವರು ಕೂಡ ತಮ್ಮ ಲಾಬಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿಯವರು ಡಿ.ಕೆ.ಶಿವಕುಮರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಒಲವು ವ್ಯಕ್ತಪಡಿಸಿದ್ದಾರೆ. ಆದರೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕೆಂಬುದಕ್ಕೆ ಡಿ.ಕೆ.ಶಿವಕುಮಾರ್ ಅವರು ಸುತರಾಂ ಒಪ್ಪಿಲ್ಲ.  ಹಾಗಾಗಿ ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದ್ದು, ಇಂದು ಸಂಜೆಯೊಳಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಂಜೆ ಡಿ.ಕೆ.ಶಿವಕುಮಾರ್ ಅವರ ಹೆಸರು ಘೋಷಣೆಯಾಗಲಿದೆ.

ಇತ್ತ ಪ್ರತಿಪಕ್ಷದ ನಾಯಕ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಪ್ರತ್ಯೇಕ ಮಾಡಲು ಕೂಡ ಸಿದ್ದರಾಮಯ್ಯನವರು ಒಪ್ಪಿಲ್ಲ. ಕೊಡುವುದಾದರೆ ಎರಡನ್ನೂ ಕೊಡಿ ಎಂದು ಹೈಕಮಾಂಡ್ ಮುಂದೆ ಮನವಿ ಸಲ್ಲಿಸಿದ್ದಾರೆ. ಹೈಕಮಾಂಡ್ ಅಧಿಕಾರ ವಿಕೇಂದ್ರೀಕರಣ ಮಾಡಲು ಮುಂದಾಗಿದ್ದು, ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದರೆ ಸಿಎಲ್‍ಪಿಗೆ ಬೇರೊಬ್ಬರನ್ನು ನೇಮಕ ಮಾಡುವ ಸಾಧ್ಯತೆ ಇದೆ.

ಸಿಎಲ್‍ಪಿಗೆ ಬೇರೊಬ್ಬರು ನೇಮಕಗೊಂಡರೆ ಪಕ್ಷದ ಮೇಲೆ ಸಿದ್ದರಾಮಯ್ಯನವರ ಹಿಡಿತ ತಪ್ಪುತ್ತದೆ ಎಂಬುದು ಸಿದ್ದು ಬಣದವರ ಆತಂಕವಾಗಿದೆ. ಹೈಕಮಾಂಡ್ ಸಂಜೆಯೊಳಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Facebook Comments