ಕಾಂಗ್ರೆಸ್‌ನಲ್ಲಿ ಸಿದ್ದು-ಡಿಕೆಶಿ ವಾರ್, ಕೈ ಕಮಾಂಡ್‍ಗೆ ಕೆಪಿಸಿಸಿ ಕಗ್ಗಂಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.18- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆಯ ಪೈಪೋಟಿಯಿಂದ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೇಮಕ ಕಗ್ಗಂಟಾಗಿ ಪರಿಣಮಿಸಿದೆ. ಸಾಮಾಜಿಕ ನ್ಯಾಯದಡಿ ನಾಲ್ಕು ಕಂದಾಯ ವಿಭಾಗಗಳಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕೆಂದು ಸಿದ್ದರಾಮಯ್ಯ ದಾಳ ಉರುಳಿಸಿದ್ದರೆ, ಕೊಡುವುದಾದರೆ ಸಂಪೂರ್ಣ ಸ್ವಾತಂತ್ರ ಕೊಡಿ. ಇಲ್ಲದಿದ್ದರೆ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆಂಬ ಡಿಕೆಶಿ ನಿಲುವು ಈಗ ಹೈಕಮಾಂಡ್‍ಗೆ ತಲೆನೋವಾಗಿ ಪರಿಣಮಿಸಿದೆ.

ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ಎಲ್ಲ ತಯಾರಿ ನಡೆದಿತ್ತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಒಪ್ಪಿಗೆ ಸೂಚಿಸಿದ್ದರು. ಆದರೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು. ಅದರಲ್ಲೂ ತಮ್ಮ ಬೆಂಬಲಿಗರಾದ ಅಲ್ಪಸಂಖ್ಯಾತ ಸಮುದಾಯದಿಂದ ಜಮೀರ್ ಅಹಮ್ಮದ್ ಅಥವಾ ಯು.ಟಿ.ಖಾದರ್, ಎಸ್ಟಿ ವರ್ಗದಿಂದ ಸತೀಶ್ ಜಾರಕಿಹೊಳಿ, ಲಿಂಗಾಯಿತ ಸಮುದಾಯದಿಂದ ಈಶ್ವರ್ ಖಂಡ್ರೆ, ಎಸ್ಸಿ ಸಮುದಾಯದಿಂದ ಎಚ್.ಆಂಜನೇಯ ಅಥವಾ ಧ್ರುವನಾರಾಯಣ ಅವರನ್ನು ನೇಮಕ ಮಾಡಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಹೇಳಿದ್ದಾರೆ.

ಒಬ್ಬರು ಅಥವಾ ಇಬ್ಬರು ಕಾರ್ಯಾಧ್ಯಕ್ಷರು ಸಾಕು ಎಂಬುದು ಹೈಕಮಾಂಡ್ ಅಭಿಮತವಾಗಿದೆ. ಆದರೆ ಸಿದ್ದರಾಮಯ್ಯನವರು ಪಕ್ಷ ಸದೃಢಗೊಳ್ಳಬೇಕಾದರೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕೆಂದು ಹೈಕಮಾಂಡ್ ಮುಂದೆ ತಮ್ಮ ಪ್ರಸ್ತಾಪವನ್ನು ಇಟ್ಟಿದ್ದಾರೆ.  ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕ ಸ್ವಲ್ಪ ವಿಳಂಬವಾಗಿದೆ. ಎಐಸಿಸಿ ಮುಖಂಡ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮತ್ತಿತರರು ನಾಲ್ವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಒಪ್ಪಿಲ್ಲ.

ಅಧಿಕಾರ ಬೇಕಾಬಿಟ್ಟಿ ವಿಕೇಂದ್ರೀಕರಣವಾದರೆ ಸರಿ ಹೊಂದುವುದಿಲ್ಲ ಎಂಬ ಅಭಿಪ್ರಾಯವನ್ನು ಹೈಕಮಾಂಡ್‍ಗೆ ತಿಳಿಸಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ ಹೈಕಮಾಂಡ್ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ನಂತರ ಡಿಸೆಂಬರ್ 5ರಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಒಂದೂವರೆ ತಿಂಗಳಾದರೂ ಹೈಕಮಾಂಡ್ ಅಧ್ಯಕ್ಷ ಸ್ಥಾನಕ್ಕೆ ಬೇರೆ ನಾಯಕರನ್ನು ನೇಮಕ ಮಾಡಲು ಆಗಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡುವುದು ಬಹುತೇಕ ಖಚಿತವಾಗಿತ್ತು.

ಆದರೆ ಕಾರ್ಯಾಧ್ಯಕ್ಷರ ನೇಮಕಾತಿ ವಿಷಯದಲ್ಲಿ ವಿಳಂಬವಾಗಿದೆ. ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ ಅವರುಗಳು ಕೂಡ ಅಧ್ಯಕ್ಷ ಹುದ್ದೆಗೆ ಲಾಬಿ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿ ಮಾತ್ರ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಕಿರೀಟ ತೊಡಿಸಲು ದೃಢ ನಿಶ್ಚಯ ಮಾಡಿದ್ದಾರೆ. ಆದರೆ ಯಾವಾಗ ಎಂಬುದು ನಿರ್ಧಾರವಾಗಬೇಕು ಅಷ್ಟೆ.

Facebook Comments