ಕೆಪಿಸಿಸಿ ಪಟ್ಟಕ್ಕೇರಿದ ಬೆನ್ನಲ್ಲೇ ಡಿಕೆಶಿ ಮಾಡಿದ ಶಪಥವೇನು ಗೊತ್ತೇ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.2- ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ, ಕೇಡರ್ ಆಧಾರಿತವಾಗಿ ಪಕ್ಷ ಕಟ್ಟಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿಷ್ಠಾಪಿಸುತ್ತೇವೆ ಎಂದು ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಜ್ಞಾ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಐತಿಹಾಸಿಕ ದಿನ. ಹೈಕಮಾಂಡ್ ಸುದೀರ್ಘ ಚರ್ಚೆ ಮಾಡಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನನಗೆ ಅಧ್ಯಕ್ಷ ಸ್ಥಾನ ಮತ್ತು ಅದರ ಜತೆಯಲ್ಲಿ ಬರುವ ಸ್ಥಾನಮಾನ, ಪ್ರಭಾವದ ಮೇಲೆ ಆಸೆ ಇಲ್ಲ.

ಆದರೆ, ಸವಾಲು ಸ್ವೀಕರಿಸಿದ್ದೇನೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸವಿದೆ ಎಂದರು. ಬಿಜೆಪಿ ನನ್ನ ರಾಜಕೀಯ ಜೀವನ ಮುಗಿದು ಹೋಯಿತು ಎಂದು ನನ್ನನ್ನು ಜೈಲಿಗೆ ಹಾಕಿದಾಗ ಸೋನಿಯಾ ಗಾಂಧಿ ನನಗೆ ಬೆಂಬಲ ವ್ಯಕ್ತಪಡಿಸಿದರು. ಜೈಲಿಗೆ ಬಂದು ನನ್ನನ್ನು ಭೇಟಿ ಮಾಡಿ ಜವಾಬ್ದಾರಿ ನೀಡುವುದಾಗಿ ಹೇಳಿ ಧೈರ್ಯ ಹೇಳಿದರು.

ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದೇನೆ. ಜತೆಗೂಡಿದರೆ ಸಾಧನೆ ಸಾಧ್ಯವಿದೆ. ಅವಕಾಶ ಸಿಗಲ್ಲ, ನೀವೆ ಸೃಷ್ಟಿಸಿಕೊಳ್ಳಬೇಕು ಎಂದು ಇಂದಿರಾಗಾಂಧಿ ಅವರು ಹೇಳಿದ್ದರು. ವಿದ್ಯಾರ್ಥಿ ಘಟಕದ ಜಿಲ್ಲಾ ಧ್ಯಕ್ಷನಾಗಿದ್ದಾಗ ರಾಜೀವ್ ಗಾಂಧಿ ಅವರ ಕಣ್ಣಿಗೆ ಬಿದ್ದೆ . ದೇವೇಗೌಡರ ವಿರುದ್ಧ ನನ್ನನ್ನು ಚುನಾವಣೆಗೆ ನಿಲ್ಲಿಸಿ ರಾಜ್ಯಕ್ಕೆ ಪರಿಚಯಿಸಿದರು ಎಂದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ನಾನು ಯಾರಿಗೂ ದ್ರೋಹ ಮಾಡಿಲ್ಲ, ನುಡಿದಂತೆ ನಡೆದಿದ್ದೇನೆ. ಎಲ್ಲರ ಜತೆ ಕೆಲಸ ಮಾಡಿದ್ದೇನೆ. ಅನೇಕ ತೊಂದರೆ ಅನುಭವಿಸಿದ್ದೇನೆ. ನನ್ನ ವೈಯಕ್ತಿಕಕ್ಕಾಗಿ ಅಲ್ಲ ಪಕ್ಷಕ್ಕಾಗಿ. ಅಧಿಕಾರ ಕೊಡದಿದ್ದಾಗಲೂ ನಾಯಕತ್ವದ ವಿರುದ್ಧ ಮಾತನಾಡಿಲ್ಲ. ಜೀವಮಾನ ಇರುವವರೆಗೂ ನಾನು ಕಾಂಗ್ರೆಸ್‍ಗೆ ನಿಷ್ಠನಾಗಿರುತ್ತೇನೆ. ನನ್ನ ಜೀವದ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ನಾನು ಯಾರಿಗೂ ದ್ರೋಹ ಮಾಡಿಲ್ಲ ಎಂದು ಭಾವನಾತ್ಮಕವಾಗಿ ನುಡಿದರು.

ಸೇವಾದಳ ಬಹಳ ಮುಖ್ಯ. ಮಹಿಳಾ, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್‍ಗೆ ಇಂದಿರಾ ಗಾಂಧಿ ಜೀವ ಕೊಟ್ಟರು. ಪ್ರತಿ ಘಟಕವೂ ಮುಖ್ಯ. ಇತ್ತೀಚೆಗೆ ಅವನ್ನು ನಾವು ಮರೆಯುತ್ತಿದ್ದೇವೆ. ಐದು ಬೆರಳು ಜತೆಯಲ್ಲಿದರೆ ಹಸ್ತ. ಇಂದು ಬೆಳಗಿದ ಜ್ಯೋತಿಗೆ ಮುಂದೆ ಶಕ್ತಿ ಕೊಡಬೇಕು ಎಂದು ಅವರು ತಿಳಿಸಿದರು.

ಕೇರಳ ರಾಜ್ಯದ ಮಾದರಿ ಪಾಲಿಸುತ್ತೇವೆ. ಎಷ್ಟೇ ದೊಡ್ಡ ನಾಯಕರಾಗಿದ್ದರೂ ತಮ್ಮ ಬೂತ್‍ನಿಂದಲೇ ಅಯ್ಕೆಯಾಗಬೇಕು. ಮಾಸ್ ಲೀಡರ್ ಬಿಟ್ಟು ಕೇಡರ್ ಬೇಸ್ ನಾಯಕತ್ವ ಬೆಳೆಸುತ್ತೇನೆ. ನನಗೆ ಗುಂಪುಗಾರಿಕೆ ಬೇಕಿಲ್ಲ. ರಾಷ್ಟ್ರಧ್ವಜದ ಬಣ್ಣ ಇರುವ ಬಾವುಟ ನಮ್ಮದು. ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡೋಣ. ನಮಗೆ ಹಿಂಬಾಲಕರು ಬೇಡ. 20 ವರ್ಷ ಬೆಳೆಸಿದ ನಾಯಕರು ಏನು ಮಾಡಿದರು ಎಂಬುದು ಗೊತ್ತಿದೆ. ನಮಗೆ ಹಿಂಬಾಲಕರು ಬೇಡ, ಪಕ್ಷ ಮುಖ್ಯ ಎಂದರು.

ಇಡಿ, ಆದಾಯ ತೆರಿಗೆ ಆಯ್ತು. ಸಿಬಿಐ ಎಲ್ಲ ಆಯ್ತು. ನಾನು ಹೆದರುವ ಮಗ ಅಲ್ಲ. ಅಮಿಷಕ್ಕೆ ಬಲಿಯಾಗಲ್ಲ. ನಾನು ಬಂಡೆ ಅಲ್ಲ. ಬಂಡೆ ಆಗಲು ಇಷ್ಟ ಇಲ್ಲ. ಬಂಡೆ ಪ್ರಕೃತಿ ಆಕೃತಿ, ಪೂಜೆ ನಮ್ಮ ಸಂಸ್ಕøತಿ, ಏಟು ಜಸ್ತಿ ಬಿದ್ದರೆ ಶಿಲೆ ಆಗುತ್ತೆ. ವಿಧಾನಸೌಧದ ಮೆಟ್ಟಿಲ ಚಪ್ಪಡಿ ಆಗಿ ನನ್ನ ಮೇಲೆ ನೀವು ವಿಧಾನಸೌಧಕ್ಕೆ ನಡೆದು ಹೋದರೆ ಸಾಕು. ಅನೇಕ ನಾಯಕರು ಈಗ ಕಾಂಗ್ರೆಸ್‍ನತ್ತ ನೋಡುತ್ತಿದ್ದಾರೆ. ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಎಂಬುದು ಜನರಿಗೆ ಗೊತ್ತಾಗುತ್ತಿದೆ ಎಂದರು.

ಕೋವಿಡ್‍ನಲ್ಲಿ ಬಿಜೆಪಿ ಜಾತಿ, ಧರ್ಮ ರಾಜಕಾರಣ: ಕೋವಿಡ್ ಸಂಕಷ್ಟದಲ್ಲಿ ಬಿಜೆಪಿ ಸರ್ಕಾರ ಜಾತಿ ಮತ್ತು ಧರ್ಮದ ರಾಜಕಾರಣ ಮಾಡಿತು ಎಂದು ಆರೋಪಿಸಿದ ಅವರು, ರೈತರಿಗೆ ಸರ್ಕಾರ ನೆರವಾಗಲಿಲ್ಲ. ಅಸಂಘಟಿತರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳಲಿಲ್ಲ. ನಮ್ಮ ಪಕ್ಷದ ನಾಯಕರು 100 ಕೋಟಿ ಮೌಲ್ಯದ ಹಣ್ಣು,

ತರಕಾರಿ ಖರೀದಿ ಮಾಡಿ ಹಂಚಿಕೆ ಮಾಡಿದರು. ಮುಂದಿನ ದಿನಗಳಲ್ಲಿ ನಾವು ಸುಮ್ಮನಿರಲ್ಲ. ನೊಂದವರ ಪರವಾಗಿ ಹೋರಾಟ ಮಾಡುತ್ತೇವೆ. ಸರ್ಕಾರ ಪ್ರಕಟಿಸಿದ 5000ರೂ.ಗಳನ್ನು ಈವರೆಗೂ ಕೊಟ್ಟಿಲ್ಲ. ಜನ ಸತ್ತ ಮೇಲೆ ಕೊಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಬಿಜೆಪಿ ಮುಕ್ತ ರಾಜ್ಯ ಮಾಡಲು ನಾವು ಸಂಕಲ್ಪ ಮಾಡೋಣ ಎಂದು ಈ ಸಂದರ್ಭದಲ್ಲಿ ಹೇಳಿದ ಡಿಕೆಶಿ, ಪಕ್ಷ ಬಿಟ್ಟು ಹೋಗುವವರಿಗೆ ಸಂತೋಷದಿಂದ ಬೀಳ್ಕೊಡುತ್ತೇವೆ. ಪಕ್ಷ ಕಟ್ಟಲು ಕಾರ್ಯಕರ್ತರಿದ್ದಾರೆ. ಹೋಗುತ್ತೇವೆ ಎನ್ನುವ ಬ್ಲಾಕ್ ಮೇಲ್‍ಗೆ ನಾವು ಹೆದರಲ್ಲ. ಕೆಲವರು ಹೋಗಿದ್ದಾರೆ, ಇನ್ನೂ ಹೋಗುವವರಿದ್ದರೆ ಅವರು ಹೋಗಲಿ.

ಪಕ್ಷ ಕಟ್ಟಲು ಮತ್ತೆ ಪಕ್ಷಕ್ಕೆ ಬರುವ ಪ್ರಮುಖ ನಾಯಕರನ್ನು ಸೇರಿಸಿಕೊಳ್ಳುತ್ತೇವೆ.ಎಲ್ಲರೂ ಸೇರಿ ಪಕ್ಷ ಕಟ್ಟೋಣ. ಕಾರ್ಯಕರ್ತರು ಬಲವಾದರೆ ಕಾಂಗ್ರೆಸ್ ಬಲಗೊಳ್ಳುತ್ತದೆ. ವಿಧಾನಸೌಧ ಮೆಟ್ಟಿಲೇರಲು ಚಪ್ಪಡಿಯಾಗುತ್ತೇನೆ ಎಂದರು.

14,700 ಸಾವಿರ ಸ್ಥಳಗಳಿಂದ ನೇರ ಪ್ರಸಾರದಲ್ಲಿ 19.60 ಲಕ್ಷ ಜನ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನೇರ ವೀಕ್ಷಣೆ ಮಾಡಿದರು.

Facebook Comments