ವಾರಕ್ಕಾಗುವಷ್ಟು ಮಾತ್ರ ಔಷಧಿ ರಾಜ್ಯದಲ್ಲಿದೆ, ಮುಂದೇನು..? : ಡಿಕೆಶಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 4- ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡಲಾಗುವ ರೆಮಿಡಿಸಿವಿರ್ ಸೇರಿದಂತೆ ಇತರ ಔಷಧಿಗಳು ಒಂದು ವಾರಕ್ಕಾಗುವಷ್ಟು ಮಾತ್ರ ಇವೆ. ಅನಂತರ ಏನು ಮಾಡುವುದೋ ಎಂದು ಗೋತ್ತಿಲ್ಲ. ಜನ ಹೆಚ್ಚು ಜಾಗೃತವಾಗಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆತಂಕ ವ್ಯಕ್ತ ಪಡಿಸಿದ್ದಾರೆ.

ಇಂದು ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಪ್ರವಾಸಕ್ಕೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದರು.

ಆಮ್ಲಜನಕ ಉತ್ಪಾದನಾ ಘಟಕಗಳನ್ನು ಕೇಂದ್ರ ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿದೆ. ರಾಜ್ಯ ಸರ್ಕಾರ 1750 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ಬೇಡಿಕೆ ಸಲ್ಲಿಸಿದೆ. ಕೇಂದ್ರ ಸರ್ಕಾರ ಅದರಲ್ಲಿ 850 ಮೆಟ್ರಿಕ್ ಟನ್ ಮಂಜೂರು ಮಾಡಿದೆ. ಕೇಂದ್ರ ಸರ್ಕಾರ ಬೇಡಿಕೆಯಷ್ಟು ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ ಎಂದರು.

ರೆಮಿಡಿಸಿವಿರ್ ಸೇರಿದಂತೆ ಇತರ ಜೀವರಕ್ಷಕ ಸಾಧನಗಳು ಏಳು-ಎಂಟು ದಿನಗಳಿಗೆ ಸಾಕಾಗುವಷ್ಟಿದೆ, ಅನಂತರ ಏನು ಮಾಡುವುದು. ಬೇಡಿಕೆ ಸಲ್ಲಿಸಿದರೆ ಅವುಗಳ ಉತ್ಪಾದನೆ ಮತ್ತು ಪೂರೈಕೆಗೆ ಕನಿಷ್ಠ 15ರಿಂದ 30 ದಿನ ಕಾಲಾವಕಾಶ ಬೇಕು. ಜನ ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು. ಸೋಂಕಿನಿಂದ ರಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಚಾಮರಾಜನಗರ ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವರಷ್ಟೆ ಅಲ್ಲ, ಇಡೀ ಸರ್ಕಾರವೇ ರಾಜಿನಾಮೆ ಕೊಟ್ಟು ಹೋಗಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬೇಕು. ಇವರಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಹೋಗಿದೆ. ಸಂಕಷ್ಟ ಸಮಯದಲ್ಲಿ ಜನರಿಗೆ ಸ್ಪಂದಿಸಿ ಸರ್ಕಾರ ತಾನು ಜೀವಂತವಾಗಿದ್ದೇನೆ ಎಂದು ತೋರಿಸಬೇಕಿತ್ತು, ಆದರೆ ಅದು ಕಾಣುತ್ತಿಲ್ಲ ಎಂದು ಹೇಳಿದರು.

ನಿನ್ನೆ ಚಾಮರಾಜನಗರದಲ್ಲಿ 33 ಜನ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಬುದ್ದಿವಂತ, ಡಿ ಪ್ಲೊಮ್ಯಾಟಿಕ್ ವ್ಯಕ್ತಿ ಇರಬಹುದು. ನಿನ್ನೆ ಚಾಮರಾಜನಗರಕ್ಕೆ ಭೇಟಿ ನೀಡಿದ ಅವರು ಅರ್ಧ ಗಂಟೆಯಲ್ಲೆ ವಾಪಾಸ್ ಬಂದಿದ್ದಾರೆ. ಮೃತಪಟ್ಟವರ ಕುಟುಂಬದ ನಾಲ್ಕಾರು ಮಂದಿಯನ್ನು ಮಾತನಾಡಿಸಿ ವಿಷಯ ತಿಳಿದುಕೊಳ್ಳಬೇಕಲ್ಲ ಎಂದು ಅಸಮಾದಾನ ವ್ಯಕ್ತ ಪಡಿಸಿದರು.

ನಾವು ಜನರ ನಡುವೆ ಇರಬೇಕು. ಅದಕ್ಕಾಗಿ ಇಂದು ಚಾಮರಾಜನಗರಕ್ಕೆ ಹೋಗುತ್ತಿದ್ದೇವೆ. ದೇಶದಲ್ಲಿ ರಾಜ್ಯದ ಮರ್ಯಾದೆ ಹೋಗುತ್ತಿದೆ. ಜನರ ಕಷ್ಟ ಸುಖ ಕೇಳುವವರಿಲ್ಲ ಎಂಬಂತಾಗಿದೆ. ನಿನ್ನೆ ಮೃತ ಪಟ್ಟವರ ಪೈಕಿ ಆರು ಏಳು ಮಂದಿಯ ಶವಗಳನ್ನು ಸಂಬಂಧಿಕರು ಪಡೆದುಕೊಂಡಿಲ್ಲ. ಪೊಲೀಸರೇ ಸಂಸ್ಕಾರ ಮಾಡಿದ್ದಾರೆ ಎಂದು ವಿಷಾದಿಸಿದರು.

ಚಾಮರಾಜನಗರದಲ್ಲಿ ನಿನ್ನೆ ಲೆಕ್ಕಕ್ಕೆ ಸಿಕ್ಕಿರುವುದು 24 ಮಂದಿ ಮಾತ್ರ, ಇದು ಒಂದು ಜಿಲ್ಲೆಯ ಕತೆ ಅಲ್ಲ. ರಾಜ್ಯಾದ್ಯಂತ ಸಂಭವಿಸಿರುವ ಸಾವುಗಳ ಅಂಕಿ ಅಂಶ ಪಡೆದು ಬಹಿರಂಗ ಪಡಿಸಿದರೆ ಜನ ಇನ್ನಷ್ಟು ಗಾಬರಿಯಾಗುತ್ತಾರೆ. ನಮಗೆ ರಾಜಕೀಯ ಬೇಕಿಲ್ಲ.

ಮೊದಲು ಜನರ ಜೀವ ಉಳಿಯಬೇಕು. ಪರಿಸ್ಥಿತಿ ತೀವ್ರ ಗಂಭೀರ ಸ್ವರೂಪದಲ್ಲಿದೆ. ನಮ್ಮ ಕುಟುಂಬದಲ್ಲೇ ನಿಗದಿಯಾಗಿದ್ದ ಎರಡು ಮದುವೆಗಳನ್ನು ಮುಂದೂಡಿದ್ದೇವೆ. ಎಲ್ಲೆಡೆ ಆಕ್ಸಿಜನ್‍ಗಾಗಿ ಹಾಹಾಕಾರ ಸೃಷ್ಟಿಯಾಗಿದೆ ಎಂದರು.

Facebook Comments

Sri Raghav

Admin