200% ಉಪ ಚುನಾವಣೆಯಲ್ಲಿ ನಮ್ಮದೇ ಗೆಲುವು : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.25- ನೂರಲ್ಲ ಇನ್ನೂರು ಪರ್ಸೆಂಟ್ ಸಿಂಧಗಿ ಹಾಗೂ ಹಾನಗಲ್‍ನಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧಕ್ಕೆ ಬೀಗ ಹಾಕಿ ಎಲ್ಲಾ ಮಂತ್ರಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಒಬ್ಬರು ಕೂಡ ವಿಧಾನಸೌಧದಲ್ಲಿ ಇಲ್ಲ. ಜನರ ಹಾಗುಹೋಗುಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ಅವರಿಗೆ ಕಾಡುತ್ತಿರುವ ಸೋಲಿನ ಭಯ ಎಂದರು.

ಮುಖ್ಯಮಂತ್ರಿಯಾದವರು ಒಂದೆರಡು ಬಾರಿ ಉಪಚುನಾವಣೆ ಪ್ರಚಾರದಲ್ಲಿ ತೊಡಗುತ್ತಾರೆ. ಆದರೆ, ಈಗ ಸಿಂಧಗಿ, ಹಾನಗಲ್‍ನಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಅಲ್ಲಿನ ಜನರು ಪ್ರಜ್ಞಾವಂತರಾಗಿದ್ದು, ಇವೆಲ್ಲವನ್ನೂ ಅರಿತಿದ್ದಾರೆ ಎಂದು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ಟೀಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಅವರು ದೊಡ್ಡವರು, ಮುಖ್ಯಮಂತ್ರಿಗಳು. ಅವರ ಮಾತನ್ನು ಕೇಳುವ ಚಿಕ್ಕವರು ಎಂದು ವ್ಯಂಗ್ಯವಾಡಿದರು.

Facebook Comments