ಕೊರೋನಾ ವಾರಿಯರ್ಸ್ ಗೆ ಧೈರ್ಯ ತುಂಬಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.15- ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಂಕಿತರು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದರು.

ಇಂದು ಬೆಳಗ್ಗೆ ಪಿಪಿಇ ಕಿಟ್ ಸಹಿತವಾಗಿ ಡಿ.ಕೆ.ಶಿವಕುಮಾರ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸೋಂಕಿತರ ವಾರ್ಡ್‍ಗೆ ತೆರಳಿ ರೋಗಿಗಳ ಜೊತೆ ಸಮಾಲೋಚನೆ ನಡೆಸಲು ಮುದಾದಾಗ ಅವಕಾಶ ನಿರಾಕರಿಸಲಾಯಿತು.

ವಾರ್ಡ್‍ಗೆ ಭೇಟಿ ನೀಡಿದ್ದರೆ ಏಳು ದಿನ ಕ್ವಾರಂಟೈನ್‍ನಲ್ಲಿ ಇರಬೇಕಾಗುತ್ತದೆ ಎಂದು ಎಚ್ಚರಿಸಿದ್ದರಿಂದ ವಾರ್ಡ್ ಭೇಟಿ ಕೈ ಬಿಟ್ಟ ಡಿ.ಕೆ.ಶಿವಕುಮಾರ್ ಅವರು, ವಿಕ್ಟೋರಿಯಾದ ಆವರಣಕ್ಕೆ ಆಸ್ಪತ್ರೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳನ್ನು ಕರೆಸಿ ಸಮಾಲೋಚನೆ ನಡೆಸಿದರು.

ಅವರನ್ನು ಭೇಟಿ ಮಾಡಿದ ಆಸ್ಪತ್ರೆ ಮುಖ್ಯಸ್ಥರು ಚಿಕಿತ್ಸೆ ಮಾಹಿತಿ ನೀಡಿದರು. ಜೊತೆಗೆ ಕೆಲವು ಸೋಂಕಿತರನ್ನು ಅಲ್ಲಿಗೆ ಕರೆಸಿ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೋಂಕಿತರಿಗೆ ನೀಡುತ್ತಿರುವ ಆಹಾರದ ಗುಣಮಟ್ಟವನ್ನು ಶಿವಕುಮಾರ್ ಪರಿಶೀಲನೆ ನಡೆಸಿದರು.

ನಂತರ ಆಸ್ಪತ್ರೆಯಲ್ಲೇ ಇರುವ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಂಕಿತರ ವಾರ್ಡ್‍ಗೆ ಸಂಪರ್ಕ ಸಾಧಿಸಿದ ಡಿ.ಕೆ.ಶಿವಕುಮಾರ್ ಅವರು, ಸೋಂಕಿತರು, ವೈದ್ಯರು ಮತ್ತು ನರ್ಸ್‍ಗಳ ಜೊತೆ ಸಮಾಲೋಚನೆ ನಡೆಸಿದರು.

ಬೆಂಗಳೂರು ಮೂಲಕ ಸೋಂಕಿತರೊಬ್ಬರನ್ನು ಮಾತನಾಡಿಸಿದಾಗ ನಾವಿಲ್ಲಿ ಚೆನ್ನಾಗಿದ್ದೇವೆ. ಉತ್ತಮ ಚಿಕಿತ್ಸೆ ಸಿಗುತ್ತಿದೆ. ಎಲ್ಲಾ ವ್ಯವಸ್ಥೆಯೂ ಉತ್ತಮವಾಗಿದೆ ಎಂಬ ಉತ್ತರ ಬಂತು. ನಂತರ ವಾರ್ಡ್‍ನಲ್ಲಿ ವೈದ್ಯರು ಮತ್ತು ನರ್ಸ್‍ಗಳನ್ನು ಡಿ.ಕೆ.ಶಿವಕುಮಾರ್ ಮಾತನಾಡಿಸಿದರು.

ವೈದ್ಯರು ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ದೇಶ ರಕ್ಷಣೆ ಮಾಡುತ್ತಿರುವವರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸೋಂಕಿತರಿಗೆ ಧೈರ್ಯ ಹೇಳಿದ ಡಿ.ಕೆ.ಶಿವಕುಮಾರ್, ನಿಮ್ಮ ಜೊತೆ ನಾವೇಲ್ಲಾ ಇದ್ದೇವೆ. ಧೈರ್ಯವಾಗಿರಿ. ಗಾಬರಿ ಆಗಬೇಡಿ. ವೈದ್ಯರು, ನರ್ಸ್‍ಗಳು ಹಗಲಿರುಳು ನಿಮ್ಮ ಸೇವೆ ಮಾಡುತ್ತಿದ್ದಾರೆ. ನಿಮಗೆ ಏನು ಆಗುವುದಿಲ್ಲ ಎಂದು ಧೈರ್ಯ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಿನಗಳಿಂದ 90 ವರ್ಷದವರೆಗಿನ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಸೇವೆ ಅಪಾರ ಗೌರವಕ್ಕೆ ಅರ್ಹವಾದದ್ದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾನು ಸರ್ಕಾರ ನಡೆಸಿರುವ ಭ್ರಷ್ಟಚಾರದ ಬಗ್ಗೆ ಮಾತನಾಡುವುದಿಲ್ಲ. ಅದಕ್ಕೆ ವಿಧಾನಸಭೆಯಿದೆ, ಅಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಜೊತೆಯಲ್ಲಿದ್ದರು.

Facebook Comments

Sri Raghav

Admin