ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅಡ್ಡಗಾಲು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.18-ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಬೇಕೆಂಬ ಕಾಂಗ್ರೆಸ್‍ನ ಹಿರಿಯ ನಾಯಕರುಗಳ ಲಾಬಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಗಾಲಾಗಿದ್ದಾರೆ.

ಹಾಲಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ ಸಿದ್ದರಾಮಯ್ಯ ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಪಕ್ಷದಲ್ಲಿ ಶಿಸ್ತು ಹಾಳಾಗಿದೆ. ಸಂಘಟನೆ ದುರ್ಬಲವಾಗಿರುವುದರಿಂದ ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚುವಂತಾಯಿತು.

2012-13ರಲ್ಲಿ ಅತ್ಯಂತ ಪ್ರಬಲವಾಗಿದ್ದ ಪಕ್ಷ ಸಂಘಟನೆ 2018ರವರೆಗೂ ತನ್ನ ಸಾಮಥ್ರ್ಯವನ್ನು ಕಾಯ್ದುಕೊಂಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷ ಕೆಲವು ವ್ಯಕ್ತಿಗಳಿಗಷ್ಟೇ ಸೀಮಿತವಾಗಿದೆ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಲಾರಂಭಿಸಿದೆ. ಹೀಗಾಗಿ ದಿನೇಶ್‍ಗುಂಡೂರಾವ್ ಅವರನ್ನು ಬದಲಾವಣೆ ಮಾಡಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಬೇಕೆಂದು ಹಲವು ಹಿರಿಯ ನಾಯಕರು ಒತ್ತಡ ಹೇರಿದ್ದಾರೆ.

ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಅವರಿಗೆ ವಹಿಸಿರುವ ಜವಾಬ್ದಾರಿಯನ್ನು ಈವರೆಗೂ ಚಾಚೂ ತಪ್ಪದೆ ಮಾಡಿ ಮುಗಿಸಿದ್ದಾರೆ. ಅವರು ಜವಾಬ್ದಾರಿ ವಹಿಸಿಕೊಂಡ ಉಪಚುನಾವಣೆಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಿ ಕಾಂಗ್ರೆಸ್‍ನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಸರ್ಕಾರ ರಚನೆ ವೇಳೆಯಲ್ಲೂ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂಬುದನ್ನು ಎಲ್ಲರೂ ಮನಗಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಹೊಸ ಶಕ್ತಿ ತುಂಬಿದ್ದರು. ಹಿರಿಯರು, ಕಿರಿಯರೆನ್ನದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವಲ್ಲಿ ಅವರು ಎತ್ತಿದ ಕೈ ಎಂಬುದು ಕಾಂಗ್ರೆಸ್‍ನಲ್ಲಿ ಜನಜನಿತವಾಗಿರುವ ಮಾತು.

ಬಹಳಷ್ಟು ಹಿರಿಯ ನಾಯಕರು ಡಿ.ಕೆ.ಶಿವಕುಮಾರ್ ಪರವಾಗಿ ಲಾಬಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್ ಅವರೇ ಸದ್ಯಕ್ಕೆ ಪಕ್ಷ ಸಂಘಟನೆ ಜವಾಬ್ದಾರಿ ಹೊತ್ತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಅದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಕೆ.ಶಿಕುಮಾರ್ ಅವರಿಗೆ ಪಕ್ಷದ ಸಾರಥ್ಯ ವಹಿಸುವುದನ್ನು ಪ್ರಬಲವಾಗಿ ವಿರೋಧಿಸಿದ್ದಾರೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದರೆ ಕಾಂಗ್ರೆಸ್‍ನಲ್ಲಿ ತಮ್ಮ ಪ್ರತಿಸ್ಪರ್ಧಿಗಳ ಗುಂಪು ಪ್ರಬಲಗೊಳ್ಳುತ್ತದೆ ಎಂಬ ಆತಂಕದಿಂದ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸುತ್ತಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುವುದು ಬೇಡ. ಸರ್ಕಾರ ಮತ್ತು ಪಕ್ಷ ಎರಡೂ ಹಂತದಲ್ಲೂ ಯಥಾಸ್ಥಿತಿಯೇ ಮುಂದುವರೆಯಲಿ. ಡಿಸೆಂಬರ್ ನಂತರ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯ ಹೈಕಮಾಂಡ್‍ಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin