ನೆರೆ ಪೀಡಿತ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.8- ನೆರೆ ಪೀಡಿತ ಸಂತ್ರಸ್ತರಿಗೆ ನೆರವಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದು, ತಾವು ಖುದ್ದು ಪ್ರವಾಹ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಲಾರಂಭಿಸಿದ್ದಾರೆ.

ಮೊದಲ ಹಂತದಲ್ಲಿ ಇಂದು ಡಿ.ಕೆ.ಶಿವಕುಮಾರ್ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ನೆರೆ ಪೀಡಿತ ಜನರಿಗೆ ಆಹಾರ, ವಸತಿ ಮತ್ತು ಪುನರ್ವಸತಿ ಕಲ್ಪಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಸರ್ಕಾರ ಎಲ್ಲಿಗೆ ತಲುಪಲು ಸಾಧ್ಯವಿಲ್ಲವೋ ಅಲ್ಲಿಗೆ ಕಾಂಗ್ರೆಸ್ ಕಾರ್ಯಕರ್ತರು ತಲುಪಬೇಕು. ಕಷ್ಟದಲ್ಲಿರುವವರಿಗೆ ಕಾಂಗ್ರೆಸ್ ಕಾರ್ಯಕರ್ತರು ನೆರವಾಗಬೇಕು ಎಂದು ಕರೆ ನೀಡಿದ್ದಾರೆ.

# ಪ್ರವಾಹ-ಪ್ರವಾಸದ ಭೀತಿ:
ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಿಸಿದ್ದು, ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಂಕಿಗೆ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗಾಗಿ ಬಹುತೇಕ ಪ್ರಮುಖ ರಾಜಕಾರಣಿಗಳು ಪ್ರವಾಸ ಕೈ ಬಿಟ್ಟು ಮನೆಯಲ್ಲಿದ್ದಾರೆ. ಸಚಿವರ ಪೈಕಿ ಹಲವಾರು ಮಂದಿಗೆ ಸೋಂಕು ತಗುಲಿದೆ. ಕೆಲವು ಸಚಿವರು ಅನಿವಾರ್ಯವಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಕಳೆದ ಹತ್ತು ದಿನಗಳಿಂದಲೂ ಬಿಟ್ಟು ಬಿಡದೆ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು ಮಂಗಳೂರಿಗೆ ಭೇಟಿ ನೀಡಿದ್ದರು. ಅನಂತರ ಕಲ್ಬುರ್ಗಿ, ಬಳ್ಳಾರಿ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಈಗ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮುಂದಾಗಿದ್ದಾರೆ.

ಡಿ.ಕೆ.ಶಿವಕುಮಾರ್ ಪ್ರವಾಸ ಕೈಗೊಂಡಾಗ ಕಾಂಗ್ರೆಸ್ ಕಾರ್ಯಕರ್ತರ ದಂಡೆ ನೆರೆದಿರುತ್ತದೆ. ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಸಾಧ್ಯವಾಗಲಿದೆ. ಒಂದೆಡೆ ಕೊರೊನಾ ಭೀತಿಯಿದ್ದರೆ ಮತ್ತೊಂದೆಡೆ ನೆರೆಯ ಹಾವಳಿ ಜನರನ್ನು ಕಾಡುತ್ತಿದೆ.

ಲಾಕ್‍ಡೌನ್ ಕಾಲದಲ್ಲಿ ಡಿ.ಕೆ.ಶಿವಕುಮಾರ್ ಅವರ ಕರೆಯ ಮೇರೆಗೆ ಕಾಂಗ್ರೆಸ್ ಕಾರ್ಯಕರ್ತರು ಹಣ್ಣು ತರಕಾರಿಗಳನ್ನು ರೈತರಿಂದ ಖರೀದಿಸಿ ಜನ ಸಾಮಾನ್ಯರಿಗೆ ಉಚಿತವಾಗಿ ಹಂಚಿದ್ದರು. ಇತ್ತೀಚೆಗೆ ಮನೆ ಮನೆಗೆ ತೆರಳಿ ಕೊರೊನಾ ತಪಾಸಣೆ ಮಾಡುವ ಕಾಂಗ್ರೆಸ್‍ನ ಅಭಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

ಕಾಂಗ್ರೆಸ್ ಪಕ್ಷವನ್ನು ಚಟುವಟಿಕೆಯಲ್ಲಿಡಲು ಡಿ.ಕೆ.ಶಿವಕುಮಾರ್ ಒಂದಲ್ಲ ಒಂದು ಕಾರ್ಯಕ್ರಮ ನಿಯೋಜಿಸುತ್ತಲೆ ಇದ್ದಾರೆ. ಈಗ ನೆರೆ ಪೀಡಿತ ಸಂತ್ರಸ್ಥರಿಗೆ ನೆರವಾಗಲು ಕರೆ ನೀಡಿದ್ದಾರೆ. ಈ ಮೂಲಕ ಸರ್ಕಾರಕ್ಕಿಂತಲೂ ವೇಗವಾಗಿ ಜನ ಸಾಮಾನ್ಯರನ್ನು ತಲುಪಲು ಕಾಂಗ್ರೆಸ್ ಪಡೆ ಪ್ರಯತ್ನಿಸುತ್ತಿದೆ.

Facebook Comments

Sri Raghav

Admin