ಕೆಪಿಎಸ್‌ಸಿ ಪರೀಕ್ಷೆಯನ್ನು ಒಂದು ತಿಂಗಳ ಕಾಲ ಮುಂದೂಡಲು ಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಹಾಗೂ ಕರ್ನಾಟಕ ಲೋಕ ಸೇವಾ ಆಯೋಗ ( ಕೆಪಿಎಸ್‌ಸಿ) ಪರೀಕ್ಷೆಗಳು ಏಕಕಾಲಕ್ಕೆ ನಿಗಧಿಯಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ತೊಂದರೆಯನ್ನು ಗಮನಿಸಿ ಒಂದು ತಿಂಗಳು ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದ್ದಾರೆ.

ಪರೀಕ್ಷೆಯನ್ನು ಮುಂದೂಡುವಂತೆ ಅನೇಕ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸಿ.ಎಂ ಈ ನಿರ್ಧಾರಕ್ಕೆ ಬಂದಿದ್ದಾರೆ. ಯುಪಿಎಸ್‍ಸಿ ಪರೀಕ್ಷೆ ಮುಗಿದ ಒಂದು ತಿಂಗಳ ನಂತರ ಕೆಪಿಎಸ್‍ಸಿ ಪರೀಕ್ಷೆಗೆ ದಿನಾಂಕ ನಿಗಧಿ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ನಾಗರಿಕ ಸೇವೆಗಳ ಮುಖ್ಯಪರೀಕ್ಷೆ ಮತ್ತು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಮುಖ್ಯ ಪರೀಕ್ಷೆಯನ್ನು ಈ ಬಾರಿ ಒಟ್ಟೊಟ್ಟಿಗೆ ಎದುರಿಸಬೇಕಾದ ಸನ್ನಿವೇಶ ಅಭ್ಯರ್ಥಿಗಳಿಗೆ ಎದುರಾಗಿತ್ತು. ಕೇಂದ್ರ ಲೋಕಸೇವಾ ಅಯೋಗ ಪರೀಕ್ಷೆಗಳು 2021 ರ ಜನವರಿ 8 ರಿಂದ 10 ರವರೆಗೆ ಹಾಗೂ 16, 17 ರಂದು ನಿಗಧಿಯಾಗಿತ್ತು. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗಳು 2020 ರ ಡಿಸೆಂಬರ್ 21 ರಿಂದ 24 ಮತ್ತು ಜನವರಿ 02 ರಿಂದ 05 ರವರೆಗೆ ನಿಗದಿಯಾಗಿವೆ.

ಕೆಪಿಎಸ್‌ಸಿ ಮತ್ತು ಯುಪಿಎಸ್ಸಿ ಪರೀಕ್ಷೆಗಳ ನಡುವೆ ಅಂತರ ಕಡಿಮೆ ಇರುವ ಕಾರಣ ಎರಡೂ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳಿಗೆ ಸಿದ್ಧತೆ ನಡೆಸಲು ಕಷ್ಟವಾಗುತದೆ. ಈ ಹಿನ್ನೆಲೆ ಅಭ್ಯರ್ಥಿಗಳು ಕೆಪಿಎಸ್ಸಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕೆಂದು ಆಗ್ರಹಿಸಿದ್ದರು.

ಕರ್ನಾಟಕ ಲೋಕಸೇವಾ ಆಯೋಗವು ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ಎ ವೃಂದದ ಸಹಾಯಕ ನಿಯಂತ್ರಕರ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಡಿಸೆಂಬರ್ 21 ರಿಂದ 24 ರವರೆಗೆ ನಿಗದಿಪಡಿಸಿದೆ.

ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಜನವರಿ 2 ರಿಂದ 5 ರವರೆಗೆ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆಗಸ್ಟ್‍ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಿ, ಇತ್ತೀಚೆಗೆ ಫಲಿತಾಂಶ ಪ್ರಕಟಿಸಲಾಗಿತ್ತು.

ಭಾರತೀಯ ಕಂಪನಿ ಕಾರ್ಯದರ್ಶಿ ಸಂಸ್ಥೆಯು ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ ಡಿ. 21ರಿಂದ 24ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಅದೇ ದಿನಗಳಲ್ಲಿ ಲೆಕ್ಕ ಪರಿಶೋಧನೆ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಕೆಪಿಎಸ್ಸಿ ಕೂಡಾ ಪರೀಕ್ಷೆ ನಡೆಸಲು ನಿರ್ಧರಿಸಿರುವುದು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿತ್ತು.

ಅಲ್ಲದೆ, ಕೇಂದ್ರ ನಾಗರಿಕ ಸೇವೆಗಳ ಹುದ್ದೆಗಳ ಆಯ್ಕೆಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಜ.8ರಿಂದ ಮುಖ್ಯಪರೀಕ್ಷೆ ನಿಗದಿಪಡಿಸಿರುವ ಮಧ್ಯೆಯೇ ಗೆಜೆಟೆಡ್ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ಜ.2ರಿಂದ ಐದು ದಿನ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿ ಪ್ರಕಟಿಸಿರುವುದು ಕೂಡಾ ಪರೀಕ್ಷಾರ್ಥಿಗಳ ಚಿಂತೆಗೆ ಕಾರಣವಾಗಿತ್ತು.

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‍ಎಸ್ಸಿ) ಡಿ. 21ರಿಂದ ಡಿ. 31ರವರೆಗೆ ಸ್ಟೆನೋಗ್ರಾಫರ್ ಹುದ್ದೆಗಳಿಗೆ (ಸಿ ಆಂಡ್ ಡಿ ಶ್ರೇಣಿ) ಪರೀಕ್ಷೆ ನಡೆಸಲು ಮುಂದಾಗಿದೆ. ಹೀಗಾಗಿ, ಪರೀಕ್ಷೆಗಳು ಕೈತಪ್ಪುವ ಆತಂಕ ಅಭ್ಯರ್ಥಿಗಳಿಗೆ ಎದುರಾಗಿತ್ತು.

ಎರಡೂ ಪರೀಕ್ಷೆಗಳ ಅಂತರ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಪೂರ್ವ ಸಿದ್ಧತೆ ನಡೆಸಲು ಕಷ್ಟವಾಗುತ್ತದೆ. ಐಎಎಸ್, ಕೆಎಎಸ್ ಆಗಬೇಕೆಂಬ ಕನಸು ಕಂಡು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಜೀವನದಲ್ಲಿ ಈ ಎರಡೂ ಪರೀಕ್ಷೆಗಳು ಪ್ರಮುಖ. ಆದರೆ, ಈ ಪರೀಕ್ಷೆಗಳ ನಡುವೆ ಹೆಚ್ಚಿನ ಕಾಲಾವಕಾಶ ಇಲ್ಲದೇ ಇರುವುದರಿಂದ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಕಷ್ಟವಾಗಲಿದೆ. ಇದರಿಂದಾಗಿ ಕೆಪಿಎಸ್ಸಿ ತನ್ನ ವೇಳಾಪಟ್ಟಿಯನ್ನು ಪರಿಷ್ಕೃರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳ ಕಾಲ ಮುಂದೂಡಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದ್ದರು.

ಈ ಹಿಂದೆಲ್ಲಾ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳ ಅವಧಿ ಅಂತರದಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಈ ಬಾರಿ 15 ದಿನಗಳ ಅಂತರ ಸಿಗುವುದು ಕೂಡ ಕಷ್ಟ. ಪರೀಕ್ಷೆ ಒತ್ತಡದಿಂದ ಅಭ್ಯರ್ಥಿಗಳಲ್ಲಿ ಅತ್ಮಸ್ಥೈರ್ಯ ಕುಗ್ಗಿದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ದಿನಾಂಕ ಗೊತ್ತುಪಡಿಸುವ ಬದಲು ಮನಸೋಇಚ್ಛೆ ವೇಳಾಪಟ್ಟಿ ರೂಪಿಸಿ ಬಿಡುಗಡೆ ಮಾಡಿರುವುದು ನಾಚೀಗೇಡಿನ ಸಂಗತಿ ಎಂದು ಅಭ್ಯರ್ಥಿಗಳು ಕೆಎಪಿಎಸ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Facebook Comments