“ಕೆಪಿಎಸ್‍ಸಿ ಅಕ್ರಮ ತಡೆಯಲು ಪರೀಕ್ಷಾ ವಿಧಾನದಲ್ಲಿ ಮಹತ್ವದ ಬದಲಾವಣೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.18- ಕೆಪಿಎಸ್‍ಸಿ ನೇಮಕಾತಿಯಲ್ಲಿನ ಅಕ್ರಮಗಳನ್ನು ತಡೆಯಲು ಪರೀಕ್ಷಾ ವಿಧಾನದಲ್ಲಿ ಮಹತ್ವದ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ವಿಧಾನಪರಿಷತ್‍ನಲ್ಲಿ ಬಿಜೆಪಿ ಸದಸ್ಯರಾದ ಪ್ರದೀಪ್ ಶೆಟ್ಟರ್ ಪ್ರಶ್ನೆಗೆ ಉತ್ತರಿಸಿದ ಅವರು, ಕೆಪಿಎಸ್‍ಸಿ ನಡೆಸುವ ಪರೀಕ್ಷೆಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿತ್ತು. ಜಿಲ್ಲಾಕಾರಿಗಳನ್ನು ಮುಖ್ಯ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ.

ಕರ್ನಾಟಕ ಸೆಕ್ಯೂರಡ್ ಎಕ್ಸಾಮಿನೇಷನ್ ಸಿಸ್ಟಮ್‍ನ್ನು ಅಳವಡಿಸಿಕೊಳ್ಳಲಾಗಿದೆ. ಕೆಪಿಎಸ್‍ಸಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಿ ಜಿಲ್ಲಾ ಖಜಾನೆ ಮತ್ತು ತಾಲ್ಲೂಕು ಉಪಖಜಾನೆಗಳಲ್ಲಿ ಇರಿಸಲಾಗಿರುವ ಪ್ರಶ್ನೆ ಪತ್ರಿಕೆಗಳ ಮೇಲೆ ಸಿಸಿಟಿವಿ ಮೂಲಕ ನಿಗಾ ಇಡಲಾಗುತ್ತಿದೆ.

ವಾರಪೂರ್ತಿ ಶಸ್ತ್ರಾಸ್ತ್ರ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿರುತ್ತದೆ. ಇತ್ತೀಚೆಗೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದರ ಹಿಂದೆ ಭದ್ರತೆಯ ಲೋಪದೋಷವಿಲ್ಲ. ಕೆಪಿಎಸ್‍ಸಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಂದ ಸೋರಿಕೆಯಾಗಿದೆ. ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಕೋಡ್ ನೀಡಲಾಗಿರುತ್ತದೆ.

ಆ ಕೋಡ್ ಕೆಪಿಎಸ್‍ಸಿ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೂ ಗೊತ್ತಿರುವುದಿಲ್ಲ. ಪ್ರಶ್ನೆ ಪತ್ರಿಕೆ ರಹಸ್ಯ ಕಾಪಾಡಿಕೊಳ್ಳಲು ನಿರ್ದೇಶಿತವಾಗಿರುವ ವಿಭಾಗದ ಸಿಬ್ಬಂದಿಗಳಿಗೆ ಕೋಡ್‍ಗಳನ್ನು ನೀಡಲಾಗಿರುತ್ತದೆ. ಈ ಬಾರಿ ಆ ಸಿಬ್ಬಂದಿಗಳಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ.

ಕೋಡ್‍ಗಳು ಬೇರೆಯವರಿಗೆ ಹೇಗೆ ತಿಳಿಯಿತು ಎಂದು ಗೊತ್ತಿಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದಾರೆ. ಕೋಡ್‍ನ ಪೆನ್‍ಡ್ರೈವ್, ಪ್ರಶ್ನೆ ಪತ್ರಿಕೆ ಬಹಿರಂಗಪಡಿಸಿದ ಆರೋಪಿಗಳಿಗೆ ಸಿಕ್ಕಿದ್ದು ಹೇಗೆ ಬಗ್ಗೆ ಕೂಡ ತನಿಖೆ ಮಾಡುತ್ತಿದ್ದೇವೆ. ತಪ್ಪಿತಸ್ಥರನ್ನು ಅಮಾನತುಗೊಳಿಸಿ ಬಂಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದರು.

ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪರೀಕ್ಷಾ ಪದ್ದತಿ ಬದಲಾವಣೆ ಮಾಡುವ ಚಿಂತನೆಯಿದೆ. ಆನ್‍ಲೈನ್ ಪರೀಕ್ಷೆ ನಡೆಸುವ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಕೇಂದ್ರ ಸರ್ಕಾರದ ಟಾಪ್‍ಕಮೀಷನ್ ಮಾದರಿಯನ್ನು ಅಳವಡಿಸಿಕೊಳ್ಳುವ ಚಿಂತನೆ ಇದೆ. ಎಸ್‍ಡಿಎಯಂತ ಗ್ರೂಪ್ ಸಿ ಹುದ್ದೆಗಳಿಗೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ.

ಪರೀಕ್ಷಾ ದಿನದಂದ ನಡೆಯುವ ಅಕ್ರಮ ತಡೆಯಲು ಒಎಂಆರ್ ಮೂಲಕ ಉತ್ತರಿಸುವ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪರೀಕ್ಷೆಗಳನ್ನು ನಡೆಸದೆ 2 ಹಂತದಲ್ಲಿ ಪರೀಕ್ಷೆ ನಡೆಸುವ ಚಿಂತನೆ ಇದೆ. ಒಂದು ವಸ್ತುನಿಷ್ಠ ಬಹು ಆಯ್ಕೆ ಮಾದರಿ, ಮತ್ತೊಂದು ವಿವರಣಾತ್ಮಕ ಮಾದರಿಯ ಪರೀಕ್ಷೆ ಮಾಡುವ ಚಿಂತನೆ ನಡೆದಿದೆ.

ಓರಲ್ ಮಾಕ್ರ್ಸ್‍ಗಳನ್ನು ಕಡಿಮೆ ಮಾಡಬೇಕೆಂಬ ಒತ್ತಾಯ ಕೂಡ ಇದೆ. ಒಟ್ಟಿನಲ್ಲಿ ಪರೀಕ್ಷೆಯಲ್ಲಿ ಸಾಕಷ್ಟು ಬದಲಾವಣೆ ತರಲು ಮರು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು. ಕೆಪಿಎಸ್‍ಸಿನಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿಗಳು ಪ್ರಥಮ ದರ್ಜೆ ಹುದ್ದೆಯ ಅಭ್ಯರ್ಥಿಗಳಾಗಲು ಎನ್‍ಒಸಿ ಕೇಳಿದ್ದರು. ಅದನ್ನು ನೀಡಲಾಗಿದ್ದು, ಅದರೆ ಪ್ರಶ್ನೆ ಪತ್ರಿಕೆಯು ಆಯೋಗದ ಸಿಬ್ಬಂದಿಗಳಿಂದ ಸೋರಿಕೆಯಾಗಿರುವುದರಿಂದ ಎನ್‍ಒಸಿಯನ್ನು ರದ್ದುಪಡಿಸಲಾಗಿದೆ ಎಂದರು.

Facebook Comments

Sri Raghav

Admin