ಕೆಪಿಎಸ್‍ಸಿ ಭ್ರಷ್ಟಾಚಾರದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.20- ಗೆಜೆಟೆಡ್ ಪ್ರೊಬೇಷನರಿ ಹುದ್ದೆ -2015ಕ್ಕೆ ನಡೆಸಲಾದ ಮುಖ್ಯ ಪರೀಕ್ಷೆಯ ಮೌಲ್ಯ ಮಾಪನ ಸೇರಿದಂತೆ ಕೆಪಿಎಸ್‍ಸಿಯ ಹೈಟೆಕ್ ಭ್ರಷ್ಟಾಚಾರದ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿರುವ ಕೆಎಎಸ್ ನೊಂದ ಅಭ್ಯರ್ಥಿಗಳ ಹಿತರಕ್ಷಣಾ ವೇದಿಕೆ ಸರ್ಕಾರ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಕೆಪಿಎಸ್‍ಸಿ ಲೂಟಿಕೋರರ ಸಂಘವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ, ಹಲವಾರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವಿರುದ್ಧ ಕಾನೂನು ಹೋರಾಟವನ್ನು ಮಾಡುತ್ತಿದ್ದೇವೆ. ಬೀದಿಗಿಳಿದು ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ ಎಂದರು. ಕೆಪಿಎಸ್‍ಸಿ ಹೈಟೆಕ್ ಮತ್ತು ಡಿಜಿಟಲ್ ಭ್ರಷ್ಟಾಚಾರ ಆರಂಭಿಸಿದೆ. ಅಂಕಗಳನ್ನೇ ತಿದ್ದಲಾಗುತ್ತಿದೆ. ಈ ಬಗ್ಗೆ 263 ಮಂದಿ ಅಬ್ಜೆಕ್ಷನ್ ಅರ್ಜಿ ದಾಖಲಿಸಿದ್ದರೂ, ಈವರೆಗೂ ಒಂದಕ್ಕೆ ಕೆಪಿಎಸ್‍ಸಿ ಉತ್ತರ ನೀಡಿಲ್ಲ. ಇದರ ಹಿಂದೆ ಭ್ರಷ್ಟಾಚಾರಿಗಳೇ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕೆಪಿಎಸ್‍ಸಿ ಆಕ್ಷೇಪಣೆಗೆ ಕೇವಲ ಒಂದು ವಾರ ಕಾಲಾವಧಿ ನೀಡಿದೆ. ಆದರೆ ನಿಯಮದ ಪ್ರಕಾರ 15 ದಿನ ನೀಡಬೇಕು. ದ್ವಿತೀಯ ಪಿಯುಸಿ ಉಪನ್ಯಾಸಕರು ಕೆಪಿಎಸ್‍ಸಿ ಮುಖ್ಯಪರೀಕ್ಷೆಯ ಮೌಲ್ಯಮಾಪನ ಮಾಡಿದ್ದಾರೆ. ಅಲ್ಲದೆ, ಪರೀಕ್ಷಾ ಕೊಠಡಿಗೆ ಕೆಪಿಎಸ್‍ಸಿ ಸದಸ್ಯರೇ ಭೇಟಿ ನೀಡಿದ್ದರು. ಇಂತಹ ಅವ್ಯವಹಾರಗಳು ನಡೆಯುತ್ತಿದ್ದರೂ ಯಾರೂ ಚಕಾರವೆತ್ತುತ್ತಿಲ್ಲ. ಆಯ್ಕೆ ಯಾಗಿರುವ ವಿದ್ಯಾರ್ಥಿಗಳ ಒಟ್ಟು ಅಂಕ ಮಾತ್ರ ನೀಡಲಾಗಿದೆ ಎಂದರು.

ಕೆಪಿಎಸ್‍ಸಿ ನಿಯಮಾವಳಿಗಳನ್ನು ಉಲ್ಲಂಘಿಸಿದವರೇ ಈಗಾಗಲೇ ಆಫೀಸರ್ ಆಗಿದ್ದಾರೆ. ನಿರ್ದಿಷ್ಟ ಸಮುದಾಯಕ್ಕೆ ಮೀಸಲಾದ ಹುದ್ದೆಗಳಿಗಿಂತ ಹೆಚ್ಚಿನವರನ್ನು ಆಯ್ಕೆ ಮಾಡಿದ್ದರು. ನಿಯಮ ಉಲ್ಲಂಘಿಸಿರುವ ಬಗ್ಗೆ ಎಲ್ಲೂ ಯಾರೂ ತನಿಖೆಗೆ ಮುಂದಾಗಿಲ್ಲ. ಇದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪರೀಕÉ್ಷಯ ನೊಂದ ಅಭ್ಯರ್ಥಿಗಳಾದ ಆಯಿಷಾ, ಅಶ್ವಿನಿ, ಪರಷಾ ಮತ್ತಿತರರು ಉಪಸ್ಥಿತರಿದ್ದರು.

Facebook Comments