ಕೆ.ಆರ್.ಮಾರುಕಟ್ಟೆಯಲ್ಲಿ ಕತ್ತಲೆಯೊಡನೆ ಛಾಯಾಚಿತ್ರಗಳ ಬೆಳಕಿನಾಟ

ಈ ಸುದ್ದಿಯನ್ನು ಶೇರ್ ಮಾಡಿ

20ಬೆಂಗಳೂರು, ಡಿ.8- ಬೆಳಕಿದ್ದಲ್ಲಿ ಕತ್ತಲೆಗೆ ಜಾಗವಿಲ್ಲ ಎಂಬುದು ಹಳೆಯ ನಾಣ್ಣುಡಿ. ವಾಸ್ತವವಾಗಿ ಅವೆರಡು ಒಟ್ಟೊಟ್ಟಿಗೇ ಇರುವಂಥವು. ಕಲೆ ಅಥವಾ ಛಾಯಾಗ್ರಹಣದಲ್ಲಿ ಸೃಜನಶೀಲ ಕಣ್ಣಿನ ದೃಷ್ಟಿಕೋನವು ಅವೆರಡನ್ನು ಒಂದರೊಡನೊಂದು ಆಟವಾಡುವಂತೆ ಮಾಡಬಲ್ಲದು. ದೈನಂದಿನ ಚಟುವಟಿಕೆಯ ಕಳೆದು ಹೋಗುವ ಕ್ಷಣಗಳನ್ನು ಹಿಡಿದಿಡುವ ದೃಷ್ಟಿಯಿಂದ ಛಾಯಾಗ್ರಾಹಕ ಕೆ.ವೆಂಕಟೇಶ್ ಅವರು ಬೆಂಗಳೂರಿನ ಹೃದಯ ಭಾಗವಾದ ಕೆಆರ್ ಮಾರುಕಟ್ಟೆಯಲ್ಲಿ ವಸ್ತು ವೈವಿಧ್ಯಗಳ ಮೇಲೆ ಮತ್ತು ಕತ್ತಲಿನಲ್ಲಿಯೂ ಓಡಾಡುತ್ತಿರುವ ಜನಸಾಮಾನ್ಯರ ಮೇಲೆ ಬೀಳುತ್ತಿರುವ ಬೆಳಕಿನ ವಿವಿಧ ರೂಪಗಳನ್ನು ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿದಿದ್ದಾರೆ.

ಸೌಂದರ್ಯವು ನೋಡುಗನ ಕಣ್ಣಿನಲ್ಲಿದೆಯೆಂಬಂತೆ, ಕಪ್ಪು-ಬಿಳುಪಿನಲ್ಲಿ ಸೆರೆ ಹಿಡಿದ, ಅನನ್ಯವಾದ ಈ ಫೋಟೋ ಸಂಗ್ರಹವು ಕತ್ತಲಿನ ನೆರಳುಗಳಲ್ಲಿ ಸಾಧಾರಣ ಜನರ ಹಾಗೂ ಅವರ ಸರಕು ಸಾಮಗ್ರಿಗಳ ಮೇಲೆ ತನ್ನ ಮಾಯಾಜಾಲ ಬೀರುವ ಬೆಳಕಿನ ಭಾವನಾತ್ಮಕ ಸ್ವರೂಪಗಳನ್ನು ಅಭಿವ್ಯಕ್ತಿಸುತ್ತದೆ. ಬೃಹದಾಕಾರವಾದ ಮೇಲ್ಸೇತುವೆಯ ಕೆಳಗಡೆ ಮಾರುಕಟ್ಟೆಯ ಅಡ್ಡರಸ್ತೆಗಳಂಥ ಸಾಧಾರಣವಾದ ಸ್ಥಳದಲ್ಲಿ ಕಂಡುಬರುವುದು ದಿನನಿತ್ಯದ ಸಾಮಾನ್ಯ ದೃಶ್ಯವೇ ಆಗಿದ್ದರೂ, ನಿಧಾನಗತಿಯಲ್ಲಿ ಚಲಿಸುವ ವಾಹನಗಳ ಹೆಡ್‍ಲ್ಯಾಂಪ್‍ಗಳಿಂದ ಹೊರಹೊಮ್ಮುವ ಬೆಳಕು, ಕೈಗಳಲ್ಲಿ ಬ್ಯಾಗ್‍ಗಳನ್ನು ಹಿಡಿದಿದ್ದ, ತಲೆಯ ಮೇಲೆ ಅಥವಾ ಭುಜಗಳ ಮೇಲೆ ಸರಕು-ಸಾಮಗ್ರಿಗಳ ಮೂಟೆಗಳು ಅಥವಾ ಚೀಲಗಳನ್ನು ಹೊತ್ತಿದ್ದ ಜನಸಾಮಾನ್ಯರಿಗೆ ಹೊಸ ಜೀವಂತಿಕೆ ತುಂಬಿದೆ.
ಸಾವಿರಾರು ಮಂದಿ ಜನಸಾಮಾನ್ಯರು ಹೂ, ಹಣ್ಣು, ತರಕಾರಿ ಮತ್ತು ನೂರಾರು ರೀತಿಯ ಬಳಕೆಯ ಸಾಮಗ್ರಿಗಳು ಅಥವಾ ದಿನಬಳಕೆ ಪದಾರ್ಥಗಳನ್ನು ಕೊಳ್ಳಲು ಅಥವಾ ಮಾರಲು ಉದ್ಯಾನನಗರಿಯ ಎಲ್ಲ ಕಡೆಗಳಿಂದ ಹಾಗೂ ಸಮೀಪದ ಪಟ್ಟಣಗಳಿಂದ ಪ್ರತಿದಿನವೂ ಮಾರುಕಟ್ಟೆಗೆ ಬಂದರೂ, ಬಹುಶಃ ಯಾರಿಗೂ ಈ ಸೃಜನಶೀಲ ಛಾಯಾಗ್ರಾಹಕನಂತೆ ಇಂತಹ ನೆಳಲು-ಬೆಳಕಿನಾಟಗಳತ್ತ ತಮ್ಮ ಚಿತ್ತ ಹರಿಸಲು ಸಮಯವಾಗಲಿ ಅಥವಾ ಅಭಿರುಚಿಯಾಗಲಿ ಇಲ್ಲವೇ ಇಲ್ಲ.

ಸಂಚಾರಿ ನಿಯಮಗಳನ್ನು ಪಾಲಿಸದ ಮತ್ತು ಜನದಟ್ಟಣೆಯ ನಿರ್ವಹಣೆ ಇಲ್ಲದ ಗಿಜಿಗುಟ್ಟುವ ಪ್ರದೇಶದಲ್ಲಿ ಜನಸಾಮಾನ್ಯರು ತಮ್ಮ ವ್ಯಾಪಾರ-ವ್ಯವಹಾರಗಳಲ್ಲಿ ನಿರತರಾಗಿದ್ದಾಗ, ಚಲಿಸುತ್ತಿರುವ ವಾಹನಗಳಿಂದ ದಿಢೀರನೆ ಹೊರಹೊಮ್ಮಿದ ಬೆಳಕು, ಸುತ್ತಲಿನ ಪ್ರದೇಶದಲ್ಲಿ ಜನರ, ಅವರ ವಸ್ತುಗಳ ಮತ್ತು ಇತರ ಸರಕು ಸಾಮಗ್ರಿಗಳ ಒಂದು ಭಾಗವನ್ನು ಪ್ರತಿಬಿಂಬಿಸಿದೆ. ಈ ಎಲ್ಲ ಛಾಯಾಚಿತ್ರಗಳ ಪ್ರದರ್ಶನ ಚಿತ್ರಕಲಾ ಪರಿಷತ್‍ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ.

2

3

4

5

6

13

12

11

9

7

14

15

20

16

 

Facebook Comments