ಜೆಡಿಎಸ್ ಭದ್ರಕೋಟೆ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿದ್ದು ಹೇಗೆ..?ಇಲ್ಲಿದೆ ವಿಶ್ಲೇಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ,ಡಿ.18- ಕೆ.ಆರ್.ಪೇಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರ ದಿಗ್ವಿಜಯ ಬಿಜೆಪಿ ವಲಯದಲ್ಲಿ ಉತ್ಸಾಹದ ಅಲೆ ಎಬ್ಬಿಸಿದ್ದರೆ ಗೆದ್ದೇ ಗೆಲ್ಲುವ ಅತ್ಯುತ್ಸಾಹದಲ್ಲಿದ್ದ ಜೆಡಿಎಸ್ ಸೋಲಿನ ಆಘಾತಕ್ಕೆ ಸಿಲುಕಿದೆ. 3ನೇ ಸ್ಥಾನಕ್ಕೆ ತಳಲ್ಪಟ್ಟ ಕಾಂಗ್ರೆಸ್ ವಲಯದಲ್ಲಿ ನಿರಾಸೆಯ ವಾತಾವರಣ ಕಾಣಿಸಿದೆ.

ಕಡಿಮೆ ಮತಗಳಿವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಡೆಗಣಿಸಿದ್ದ ಗಂಗಾಮತ, ನಾಯಕ, ಮಡಿವಾಳ, ವಿಶ್ವಕರ್ಮ, ಈಡಿಗ, ಗಾಣಿಗ, ಕುಂಬಾರ, ಕುರುಹಿನಶೆಟ್ಟಿ, ದೇವಾಂಗ, ಸವಿತಾ ಸಮಾಜ ಮುಂತಾದ ತಳ ಸಮುದಾಯದ ಸುಮಾರು 25ರಿಂದ 30ಸಾವಿರ ಮತಗಳನ್ನು ಕ್ರೋಢೀಕರಿಸಿದ್ದು, ಕುರುಬ, ದಲಿತ ಮತ್ತು ಒಕ್ಕಲಿಗರ ಮತಗಳನ್ನು ಯಶಸ್ವಿಯಾಗಿ ವಿಭಜಿಸಿದ್ದು ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳು ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷದ ನಾಯಕರು ನೀಡಿದ ಒಳೇಟು ಪಕ್ಷದ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ಸೋಲಿಗೆ ಪ್ರಮುಖ ಕಾರಣ ಎಂಬ ಅಂಶವನ್ನು ಇದೀಗ ಜೆಡಿಎಸ್ ಕಾರ್ಯಕರ್ತರು ಬಿಚ್ಚಿಟ್ಟಿದ್ದಾರೆ.

ಪಟ್ಟಣದ ನಂಜಮ್ಮ ಮುದ್ದೇಗೌಡ ಸಮುದಾಯಭವನದಲ್ಲಿ ನಡೆದ ಜೆಡಿಎಸ್ ಪಕ್ಷದ ಆತ್ಮಾವಲೋಕನ ಸಭೈಯಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರ ಒಳೇಟಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಟ್ಟಣದಲ್ಲಿ ಆಯೋಜಿದ್ದ ಚುನಾವಣಾ ಪ್ರಚಾರ ಸಭೈಯಲ್ಲಿ ಮಾತನಾಡುತ್ತಾ ಕ್ಷೇತ್ರದಲ್ಲಿನ ವೀರಶೈವ ಬಂಧುಗಳು ಒಂದೇ ಒಂದು ಮತವನ್ನೂ ಬಿಜೆಪಿ ಹೊರತು ಪಡಿಸಿ ಮತ್ಯಾವುದೇ ಪಕ್ಷಕ್ಕೆ ಚಲಾಯಿಸಬಾರದೆಂದು ಕರೆ ನೀಡಿದ್ದರು. ತಮ್ಮ ನಾಯಕನ ಅಣತಿಯನ್ನು ಸಂಪೂರ್ಣವಾಗಿ ತಾಲೂಕಿನ ವೀರಶೈವ ಸಮಾಜ ಪಾಲಿಸಿತು. ಹಾಗಾಗಿ ಬಿಜೆಪಿ ಅಭ್ಯರ್ಥಿ ಗೆಲುವು ಸುಲಭವಾಯಿತು.

ಕ್ಷೇತ್ರದಲ್ಲಿ ನಾಲ್ವರು ಜಿ.ಪಂ ಮತ್ತು 16ಜನ ತಾಲೂಕು ಪಂಚಾಯತಿ ಸದಸ್ಯರನ್ನು ಜೆಡಿಎಸ್ ಪಕ್ಷ ಹೊಂದಿದೆ. ಆದರೂ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಮತ ತಂದುಕೊಡುವಲ್ಲಿ ಯಶಸ್ವಿಯಾಗಿಲ್ಲ. ಅದೇ ರೀತಿ ತಾ.ಪಂ. ಸದಸ್ಯರೂ ವಿಫಲವಾದರು. ಪ್ರಸಕ್ತ ಉಪಚುನಾವಣೆಯನ್ನು ಬಿಜೆಪಿ ವರಿಷ್ಠರು ಸವಾಲಾಗಿ ತೆಗೆದುಕೊಂಡರು. ತಳ ಸಮುದಾಯವನ್ನು ಪ್ರತಿನಿಧಿಸುವ ರಾಜ್ಯ ಮಟ್ಟದ ವಿವಿಧ ಜಾತಿಗಳ ಮುಖಂಡರು ಕ್ಷೇತ್ರದಲ್ಲಿ ನೆಲೆನಿಂತು ತಮ್ಮ ತಮ್ಮ ಸಮುದಾಯಗಳ ಸಮಾವೇಶ ನಡೆಸಿ ತಳ ಸಮುದಾಯಗಳ ಮತಗಳನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಯಶಸ್ವಿಯಾದರು.

ಆದರೆ ಇದೇ ತಂತ್ರವನ್ನು ಜೆಡಿಎಸ್ ನಾಯಕರು ಮಾಡಲಿಲ್ಲ. ಹಾಗಾಗಿ ಜೆಡಿಎಸ್ ತನ್ನ ಭದ್ರಕೋಟೆಯನ್ನು ಕಳೆದುಕೊಳ್ಳಬೇಕಾಯಿತು. ಪ್ರಮುಖ ನಾಯಕರು ಕೇವಲ ರೋಡ್‍ಶೋ ಮತ್ತು ಬಹಿರಂಗ ಸಭೆಗಳಿಗೆ ಸೀಮಿತರಾದರೇ ಹೊರತು ಕ್ಷೇತ್ರದಲ್ಲಿ ನೆಲೆನಿಂತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ಮಾಡಿ ಗೆಲುವಿನ ತಂತ್ರ ರೂಪಿಸಲಿಲ್ಲ. ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಬರಲು ಸಿದ್ದರಿದ್ದ ಹಲವು ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಕೆಲವರು ತಡೆದರು.

ಇದರ ಲಾಭ ಪಡೆದ ಬಿಜೆಪಿ ಇತರ ಪಕ್ಷದ ಮುಖಂಡರಿಗೆ ಕೆಂಪು ಹಾಸಿನ ಸ್ವಾಗತ ನೀಡಿ ಅದರ ಲಾಭ ಪಡೆಯಿತು. ಬಿಜೆಪಿ ಹೊರಗಿನಿಂದ ಸಾವಿರಾರು ಕಾರ್ಯಕರ್ತರನ್ನು ಕರೆತಂದು ಆಮಿಷ ಒಡ್ಡಿದ್ದರೂ ಅದನ್ನು ತಡೆಯುವ ಯಾವುದೇ ಪ್ರಯತ್ನವನ್ನು ಜೆಡಿಎಸ್ ಮತ್ತು ಕಾಂಗ್ರೆಸ್‍ನವರು ಮಾಡಲಿಲ್ಲ. ಇದೆಲ್ಲದರ ಲಾಭವನ್ನು ಪಡೆದು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಸುಲಭವಾಗಿಸಿತು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

Facebook Comments